ಕಲಬುರಗಿ ಜಿಲ್ಲೆಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ ಸಂಪುಟದಿಂದ ಸಚಿವ ಪ್ರಿಯಾಂಕ್ ವಜಾಕ್ಕೆ ಮಣಿಕಂಠ ಆಗ್ರಹ

20230824_122850
Published on

ಮತ್ತೊಬ್ಬರನ್ನು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಿಸಲು ಮುಖ್ಯಮಂತ್ರಿಗಳಿಗೆ ಮಣಿಕಂಠ ರಾಠೋಡ  ಮನವಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪ್ರಿಯಾಂಕ್ ಖರ್ಗೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ  ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಎರಡು ಲಾಕಪ್ ಡೆತ್ ನಡೆದಿದ್ದು, ಜನರಿಗೆ ರಕ್ಷಣೆ ಇಲ್ಲದಂತಾಗಿದೆ. ಹೊಣೆಯನ್ನು ನಿಭಾಯಿಸುವಲ್ಲಿ  ಖರ್ಗೆ ವಿಫಲಗೊಂಡಿದ್ದು ಕೂಡಲೇ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಬಿಜೆಪಿ ಮುಖಂಡ  ಮಣಿಕಂಠ ರಾಠೋಡ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಪ್ರಿಯಾಂಕ್‌ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು, ಕಲಬುರಗಿಗೆ ಮತ್ತೊಬ್ಬರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಈ ನಿಟ್ಟಿನಲ್ಲಿ ಸಿಎಂ ಸಿದ್ಧರಾಮಯ್ಯ ಅವರು  ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಶೋಕ ನಗರ ಠಾಣೆಯಲ್ಲಿ  ಹಾಗೂ ಸಚಿವರ ಕ್ಷೇತ್ರವಾಗಿರುವ ಚಿತ್ತಾಪುರದಲ್ಲಿ  ಪೊಲೀಸರೇ ಹೊಡೆದು ಇಬ್ಬರನ್ನು ಬಲಿ ಪಡೆದಿದ್ದಾರೆ.  ಕಸ್ಟಡಿ ಡೆತ್ ಆಗಿದೆ. ಚಿತ್ತಾಪುರದಲ್ಲಿ ಪೊಲೀಸರ ಕಿರುಕುಳ ತಾಳದೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೇವರ್ಗಿಯಲ್ಲಿ ಶೂಟ್ ಔಟ್ ಮಾಡಲಾಗಿದೆ. ಇವೆಲ್ಲನ್ನೂ ನೋಡಿದಾಗ  ಕಾನೂನು ಸುವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ.  ಪೊಲೀಸರು ಮನಬಂದAತೆ ವರ್ತಿಸುವ ಮೂಲಕ ಜನರಲ್ಲಿ ಭಯ ಮೂಡಿಸುತ್ತಿದ್ದಾರೆ  ಎಂದು ಕಿಡಿಕಾರಿದರು. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಚಿತ್ತಾಪುರ ತಾಲೂಕಿನ ಮಾಡಬೂಳ ಪೊಲೀಸರ ಕಿರುಕುಳ ತಾಳದೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದರೆ, ನನ್ನ ವಿರುದ್ಧ  ಎಫ್‌ಐಆರ್ ದಾಖಲಿಸುತ್ತಾರೆ. ನನ್ನ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ದೂರನ್ನು ಎರಡನೇ ನಿಮಿಷದಲ್ಲಿ ಕೇಸ್ ದಾಖಲಿಸಿಕೊಂಡು ನನ್ನನು ಬಂಧಿಸುತ್ತಾರೆ. ಆದರೆ, ನಾನು ಸಚಿವ ಪ್ರಿಯಾಂಕ್ ವಿರುದ್ಧ ನೀಡಿದ ದೂರಿಗೆ ಪೊಲೀಸರು  ಎಫ್‌ಐಆರ್ ದಾಖಲಿಸುತ್ತಿಲ್ಲ.ಬದಲಿಗೆ ಸ್ವೀಕೃತಿ ಪತ್ರ ನೀಡುತ್ತಿದ್ದಾರೆ ಇದ್ಯಾವ ನ್ಯಾಯ ಎಂದು ಮಣಿಕಂಠ ಖಾರವಾಗಿ ಪ್ರಶ್ನಿಸಿದರು. ಕಾನೂನು .ಸಂವಿಧಾನ ಎಲ್ಲರಿಗೂ ಒಂದೇ. ಆದರೆ, ಕಲಬುರಗಿ ಜಿಲ್ಲೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net