

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇ.50 ರಿಯಾಯಿತಿ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ 13 ದಿನಗಳಲ್ಲಿ 3.22 ಲಕ್ಷ ಪ್ರಕರಣಗಳಿಂದ 9.30 ಕೋಟಿ ರೂ. ದಂಡ ಸಂಗ್ರಹವಾಗಿದೆ. ಅದಾಗ್ಯೂ ರಿಯಾಯಿತಿ ದರದಲ್ಲಿ ದಂಡ ಕಟ್ಟುವವರಿಗೆ ಇನ್ನೆರಡೇ ದಿನ ಉಳಿದುಕೊಂಡಿದೆ.
ಫೆ.11ರ ಒಳಗೆ ದಾಖಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡವನ್ನು ಶೇ.50 ಪಾವತಿಸಿ ಪ್ರಕರಣಗಳನ್ನು ಮಾ.18ರೊಳಗೆ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ) ಪೇಟಿಎಂ ಆ್ಯಪ್, ಕೆಎಸ್‌ಪಿ ಆ್ಯಪ್, ಕರ್ನಾಟಕ ಒನ್, ಬೆಂಗಳೂರು ಒನ್ ವೆಬ್‌ಸೈಟ್‌ಗಳಲ್ಲಿ ದಂಡ ಪಾವತಿಸಲು ಅವಕಾಶ ನೀಡಲಾಗಿದೆ.
ಬಾಕಿ ದಂಡ ಪಾವತಿಗೆ ರಿಯಾಯಿತಿ ಸೌಲಭ್ಯ 2 ದಿನ ಮಾತ್ರ ಇರಲಿದೆ. ಕಳೆದ ಬಾರಿ ನಗರ ವ್ಯಾಪ್ತಿಯಲ್ಲಿ ಜನರು ಸ್ವಯಂಪ್ರೇರಿತರಾಗಿ 9 ದಿನಗಳಲ್ಲಿ 43.35 ಲಕ್ಷ ಪ್ರಕರಣಗಳಿಂದ 152.87 ಕೋಟಿ ರೂ. ದಂಡ ಪಾವತಿಸಿದ್ದರು.