

ರಾಮನಗರ: ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆ ನಿವೇಶನದಾರರು ಆ.30ರೊಳಗೆ ಅಭಿವೃದ್ಧಿ ಶುಲ್ಕ ಪಾವತಿಸಲು ಕೊನೆ ದಿನವಾಗಿದೆ. ಮತ್ತೊಮ್ಮೆ ಇಂತಹ ಅವಕಾಶ ಸಿಗುವುದಿಲ್ಲ. ನಿವೇಶನದಾರರು ಸಹಕರಿಸಬೇಕು ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದರು.
ರಾಮನಗರ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಮನಗರ ಪ್ರಾಧಿಕಾರದ ಅರ್ಚಕರಹಳ್ಳಿ ಹೆಲ್ತ್ ಸಿಟಿ, ಜೀಗೇನಹಳ್ಳಿ, ಚನ್ನಪಟ್ಟಣ ಸುಣ್ಣಗಟ್ಟ ಬಡಾವಣೆಗಳಲ್ಲಿ 1837 ನಿವೇಶನಗಳಲ್ಲಿ 1651 ನಿವೇಶನ, 176 ಸಿ.ಎ ನಿವೇಶನ ಹಂಚಿಕೆ ಮಾಡಲಾಗಿದೆ. ನಿವೇಶನಗಳು ಕಾನೂನಾತ್ಮಕ ಸಮಸ್ಯೆಯಲ್ಲಿ ಸಿಲುಕಿದ್ದವು. ಅವುಗಳಿಗೆ ಸರ್ಕಾರ ಮರುಜೀವ ನೀಡಿದೆ. ಹಂಚಿಕೆ ಮತ್ತು ಹರಾಜು ಮೂಲಕ ನಿವೇಶನ ಪಡೆದವರಿಂದ ಚದರ ಅಡಿಗೆ 200 ರೂ. ಅಭಿವೃದ್ಧಿ ಶುಲ್ಕ ಪಾವತಿಸಿಕೊಂಡು ಬಡಾವಣೆ ಅಭಿವೃದ್ಧಿ ಪಡಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿತ್ತು ಎಂದರು.
ಅದರಂತೆ ನಿವೇಶನದಾರರ ಸಭೆ ನಡೆಸಿ ಅಭಿವೃದ್ಧಿ ವಿಚಾರವಾಗಿ ನಿವೇಶನದಾರರ ಜತೆ ಚರ್ಚೆ ನಡೆಸಲಾಗಿತ್ತು. ನಿವೇಶನದಾರರು ಇಲ್ಲಿಯವರೆಗೆ 752 ಮಂದಿ 17 ಕೋಟಿ ರೂ. ಅಭಿವೃದ್ಧಿ ಶುಲ್ಕ ಪಾವತಿ ಮಾಡಿದ್ದಾರೆ. ಉಳಿದ 900 ಮಂದಿ ಶುಲ್ಕ ಪಾವತಿಸಬೇಕು. ಉಳಿದವರು ಆದಷ್ಟು ಬೇಗ ಅಭಿವೃದ್ಧಿ ಶುಲ್ಕ ಪಾವತಿಸಿದರೆ ನಿವೇಶನ ಮತ್ತು ಬಡಾವಣೆಗಳಿಗೆ ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುತ್ ಸೇರಿ ಮೂಲ ಸೌಕರ್ಯ ಒದಗಿಸಲು ಸಹಕಾರಿಯಾಗುತ್ತದೆ. ಈಗಾಗಲೇ ಶುಲ್ಕ ಪಾವತಿಸಿರುವವರು ಬಡಾವಣೆಗೆ ಮೂಲಸೌಕರ್ಯ ಒದಗಿಸುವಂತೆ ಕೇಳುತ್ತಿದ್ದಾರೆ. ಎಲ್ಲರೂ ಶುಲ್ಕ ಪಾವತಿಸಿದರೆ ಬಹು ಬೇಗ ಬಡಾವಣೆಗಳಿಗೆ ಮೂಲ ಸೌಕರ್ಯ ಒದಗಿಸಬಹುದು. ನಿವೇಶನಗಳಿಗೆ ಈಗ ಬೆಲೆ ಬಂದಿದೆ ಯಾರೂ ನಿವೇಶನ ಮಾರಬಾರದು. ಪ್ರಾಧಿಕಾರಕ್ಕೆ ಅಭಿವೃದ್ಧಿ ಶುಲ್ಕ ಪಾವತಿಸಿ ನಿವೇಶನ ಪಡೆದವರು ಸಹಕರಿಸಿ ಎಂದರು.
ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ಕುಮಾರ್ ಪ್ರಭಾರ ಆಯುಕ್ತ ಶೇಖರ್ ಇದ್ದರು.