ನಾಮಪತ್ರ ವಾಪಸಾತಿಗೆ ಭರ್ಜರಿ ಆಮಿಷ

Gramayana Logo
Published on

ಹಾವೇರಿ: ಹಳ್ಳಿ ವಿಧಾನಸಭೆ ಎಂದೇ ಜನಜನಿತವಾಗಿರುವ ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿದಿದ್ದು, ಗೆಲುವಿಗೆ ಮಗ್ಗಲ ಮುಳ್ಳಾಗುವ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸುವ ಕಸರತ್ತು ಈಗ ಚುರುಕುಗೊಂಡಿದೆ.

ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಜಿಲ್ಲೆಯ ರಾಣೆಬೆನ್ನೂರ, ಹಾವೇರಿ, ಹಿರೇಕೆರೂರ, ರಟ್ಟಿಹಳ್ಳಿ ತಾಲೂಕುಗಳ 104 ಗ್ರಾಪಂಗಳ 1,506 ಸದಸ್ಯರ ಆಯ್ಕೆಗೆ ಒಟ್ಟು 4,962 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಡಿ. 22ರಂದು ಚುನಾವಣೆ ಜರುಗಲಿದ್ದು, ನಾಮಪತ್ರ ವಾಪಸಾತಿಗೆ ಡಿ. 14 ಕೊನೆಯ ದಿನವಾಗಿದೆ. ಹೀಗಾಗಿ ಬಾಕಿಯಿರುವ ಎರಡು ದಿನಗಳಲ್ಲಿ ಬಲಾಢ್ಯರಾಗಿರುವ ಅಭ್ಯರ್ಥಿಗಳು ನಾನಾ ಆಮಿಷಗಳನ್ನೊಡ್ಡಿ ನಾಮಪತ್ರ ವಾಪಸ್ ತೆಗೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಪ್ರಮುಖ ಗುಂಪುಗಳೆರಡು: ಪಕ್ಷಾತೀತವಾಗಿ ಗ್ರಾಪಂ ಚುನಾವಣೆ ನಡೆಯುತ್ತಿದ್ದರೂ ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾಗಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಗುಂಪುಗಳಾಗಿ ಮಾಡಿದ್ದಾರೆ. ಗ್ರಾಪಂಗಳ ಒಂದೊಂದು ವಾರ್ಡ್​ಗಳಿಂದ ಮೀಸಲಾತಿವಾರು ಇಬ್ಬರಿಂದ ನಾಲ್ಕು ಜನ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಅಲ್ಲಿ ಆಯಾ ಪಕ್ಷಗಳ ಬೆಂಬಲಿತ ಮೀಸಲಾತಿವಾರು ಅಭ್ಯರ್ಥಿಗಳು ಗುಂಪು ಕಟ್ಟಿಕೊಂಡು ಕಣಕ್ಕಿಳಿದಿದ್ದಾರೆ. ಜಿಲ್ಲೆಯ ಬಹುತೇಕ ಗ್ರಾಪಂಗಳಲ್ಲಿ ಬಿಜೆಪಿ, ಕಾಂಗ್ರೆಸ್ ಬೆಂಬಲಿತ ಗುಂಪುಗಳೇ ಬಹುತೇಕ ಅಖಾಡದಲ್ಲಿವೆ.

ಮೂರನೇ ಅಭ್ಯರ್ಥಿಗೆ ಭರ್ಜರಿ ಕೊಡುಗೆ: ಬಿಜೆಪಿ, ಕಾಂಗ್ರೆಸ್ ಬೆಂಬಲಿತರ ನಡುವೆ ನೇರ ಹಣಾಹಣಿಯಿರುವ ಕಡೆಗಳಲ್ಲಿ ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವವರನ್ನು ಪಕ್ಷೇತರರೆಂದು ಮತದಾರರು ಪರಿಗಣಿಸಿದ್ದಾರೆ. ಈ ರೀತಿ ಪಕ್ಷೇತರರಾಗಿ ಸ್ಪರ್ಧಿಸಿರುವವರು ಜಾತಿ, ಹಣ ಬಲದಿಂದ ಎಲ್ಲಿ ನಮ್ಮ ಗೆಲುವಿಗೆ ಅಡ್ಡಿಯಾಗುವರೋ, ಇರುವ ಅಲ್ಪ ಮತಗಳು ವಿಭಜನೆಯಾಗುವುದೋ ಎಂಬ ಆತಂಕ ಪಕ್ಷ ಬೆಂಬಲಿತ ಅಭ್ಯರ್ಥಿಗಳಲ್ಲಿ ಮೂಡಿದೆ. ಈ ರೀತಿ ಮೂರನೇ ಅಭ್ಯರ್ಥಿಯಾಗಿರುವವರ ಮನವೊಲಿಸಿ ನಾಮಪತ್ರ ವಾಪಸ್ ಪಡೆಯುವಂತೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದ್ದಾರೆ. ಕೊಡುಗೆ ಸ್ವೀಕರಿಸಲು ಒಪ್ಪದವರಿಗೆ ಕುಟುಂಬದ ಮುಖ್ಯಸ್ಥರು, ಸ್ವಜಾತಿಯ ಮುಖಂಡರು, ಹಾಲಿ, ಮಾಜಿ ಜಿಪಂ, ತಾಪಂ ಸದಸ್ಯರು, ಶಾಸಕರು, ಮಾಜಿ ಶಾಸಕರಿಂದ ಒತ್ತಡ ಹಾಕಿಸುತ್ತಿದ್ದಾರೆ. ಇನ್ನು ನೇರ ಸ್ಪರ್ಧೆಯಿರುವ ಕಡೆಗಳಲ್ಲಿ ಆರ್ಥಿಕವಾಗಿ ಬಲಾಢ್ಯವಾಗಿರುವವರು ಲಕ್ಷ, 2 ಲಕ್ಷದ ಆಮಿಷ ಒಡ್ಡುತ್ತಿರುವುದು ತಿಳಿದುಬಂದಿದೆ.

ಒತ್ತಡ ತಪ್ಪಿಸಿಕೊಳ್ಳಲು ಪಲಾಯನ: ಒಂದೆಡೆ ಮೂರನೇ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಪಕ್ಷ ಬೆಂಬಲಿತ ಅಭ್ಯರ್ಥಿಗಳು ತಂತ್ರಗಾರಿಕೆ ಮಾಡುತ್ತಿದ್ದರೆ, ಅವರ ತಂತ್ರಗಾರಿಕೆಗೆ ಸೆಡ್ಡು ಹೊಡೆದಿರುವ ಕೆಲವರು ಯಾವುದಕ್ಕೂ ಜಗ್ಗದೆ ಮೊಬೈಲ್ ಸ್ವಿಚ್​ಆಫ್ ಮಾಡಿಕೊಂಡು ಊರಿಂದ ಪಲಾಯನಗೈಯುತ್ತಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿರುವ ಡಿ. 14ರ ನಂತರ ಮರಳಿ ಊರಿಗೆ ಬಂದು ಚುನಾವಣೆ ಪ್ರಚಾರ ನಡೆಸುವ ತಂತ್ರಗಾರಿಕೆ ರೂಪಿಸಿಕೊಂಡಿದ್ದಾರೆ.

ನಾ ಗೆಲ್ಲೋದಿಲ್ಲ, ಆದರೆ, ಅಂವಾ ಸೋಲ್ತಾನೆ..

ಕೆಲ ಕ್ಷೇತ್ರಗಳಲ್ಲಿ ಮೂರನೇ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವವರು ‘ನಾನು ಗೆಲ್ಲುವುದಿಲ್ಲ ನಿಜ. ಆದರೆ, ನನ್ನ ವಿರುದ್ಧ ನಿಂತಿರುವ ಅವನ ಮತಗಳನ್ನು ವಿಭಜಿಸಿ ಇನ್ನೋರ್ವ ಅಭ್ಯರ್ಥಿಗೆ ಅನುಕೂಲ ಮಾಡ್ತೇನೆ ನೋಡ್ತಾ ಇರು’ ಎಂದು ರಾಜಾರೋಷವಾಗಿ ಹೇಳಿಕೊಂಡು ತಿರುಗುತ್ತಿರುವುದು ಹಳ್ಳಿಗಳಲ್ಲಿ ಕಂಡುಬರುತ್ತಿದೆ. ಅಲ್ಲದೆ, ಪಕ್ಷಗಳ ಗಲಾಟೆಯಲ್ಲಿ ನಾನೇ ಆಯ್ಕೆಯಾಗ್ತೀನಿ. ನಾನೇಕೆ ವಾಪಸ್ ಪಡೆಯಲಿ ಎಂದು ಮನವೊಲಿಸಲು ಬಂದವರಿಗೆ ತಿರುಗೇಟು ನೀಡುತ್ತಿರುವುದು ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net