

ಬೆಂಗಳೂರು: ಸಾಫ್ಟ್ವೇರ್ ಕಂಪನಿಗಳ ಸೋಗಿನಲ್ಲಿ ಲ್ಯಾಪ್‌ಟಾಪ್‌ಗಳನ್ನು ಬಾಡಿಗೆಗೆ ಪಡೆದು ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದ ಮೂವರು ವಂಚಕರನ್ನು ಬೈಯ್ಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಮ್ಮನಹಳ್ಳಿ ನಿವಾಸಿ ಸೈಫ್ ಪಾಷಾ (25), ವೀರಣ್ಣಪಾಳ್ಯದ ಮೋಹಿನುದ್ದೀನ್ ಖುರೇಷಿ (26) ಮತ್ತು ಮಹಾರಾಷ್ಟ್ರ ಮೂಲದ ಪ್ರತೀಕ್ ನಗರ್‌ಕರ್ (31) ಬಂಧಿತರು. ಆರೋಪಿಗಳಿಂದ 45 ಲಕ್ಷ ರೂ. ಮೌಲ್ಯದ 96 ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಅಶ್ವಕ್ ಎಂಬುವನ ಪತ್ತೆಗೆ ತೀವ್ರ ಶೋಧ ನಡೆದಿದೆ.
ಸೈಫ್ ಪಾಷಾ ಮತ್ತು ಅಶ್ವಕ್ ವಿರುದ್ಧ ಮಡಿವಾಳ, ಆರ್.ಟಿ.ನಗರ, ಜೆ.ಪಿ.ನಗರ, ಮಾರತ್ತಹಳ್ಳಿ, ಸಂಪಿಗೆಹಳ್ಳಿ, ಅಶೋಕನಗರ ಮತ್ತು ಹೈದರಾಬಾದ್‌ನಲ್ಲಿ ನಡೆದಿದ್ದ 7 ಪ್ರಕರಣಗಳು ಪತ್ತೆಯಾಗಿವೆ. ಮೋಹಿನುದ್ದೀನ್ ವಿರುದ್ಧ ಜೆ.ಪಿ.ನಗರ ಮತ್ತು ಅಶೋಕನಗರ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿವೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳು ಇಂಜಿನಿಯರಿಂಗ್, ಬಿ.ಕಾಂ. ವ್ಯಾಸಂಗ ಮಾಡಿದ್ದಾರೆ. ಈ ಹಿಂದೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ಶೋಕಿ ಜೀವನ ನಡೆಸಲು, ಖರ್ಚಿಗೆ ಹಣಕ್ಕಾಗಿ ದಂಧೆಗೆ ಇಳಿದಿದ್ದರು. ಸಾಫ್ಟ್ವೇರ್ ಕಂಪನಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕಚೇರಿಗಳನ್ನು ತೆರೆಯುತ್ತಿದ್ದರು. ಲ್ಯಾಪ್‌ಟಾಪ್‌ಗಳನ್ನು ಬಾಡಿಗೆಗೆ ನೀಡುವ ಕಂಪನಿಗಳನ್ನು ಸೈಫ್ ಪಾಷಾ ಸಂಪರ್ಕಿಸುತ್ತಿದ್ದ. ಕಚೇರಿಯ ಉಪಯೋಗಕ್ಕಾಗಿ ಲ್ಯಾಪ್ಟಾಪ್ಗಳು ಬೇಕಾಗಿವೆ ಎಂದು ಹೇಳಿ ದುಬಾರಿ ಬೆಲೆಯ ಲ್ಯಾಪ್‌ಟಾಪ್‌ಗಳನ್ನು ಪಡೆಯುತ್ತಿದ್ದರು. ಬಳಿಕ ಏಕಾಏಕಿಯಾಗಿ ಕಚೇರಿ ಬಂದ್ ಮಾಡಿಕೊಂಡು ನಾಪತ್ತೆಯಾಗುತ್ತಿದ್ದರು. ಬೇರೆ ಕಡೆ ಕಚೇರಿ ತೆರೆದು, ಲ್ಯಾಪ್‌ಟಾಪ್ ಖರೀದಿಸಲು ಮುಂದಾಗಿರುವ ಗ್ರಾಹಕರ ಮಾಹಿತಿಯನ್ನು ಜಸ್ಟ್ ಡಯಲ್ ಮೂಲಕ ಸಂಗ್ರಹಿಸುತ್ತಿದ್ದರು. ಇವರ ಬಳಿ ಲ್ಯಾಪ್‌ಟಾಪ್ ಖರೀದಿಸಲು ಮುಂದಾದವರಿಗೆ, ಕಂಪನಿ ನಷ್ಟದಲ್ಲಿರುವುದರಿಂದ ಮುಚ್ಚುತ್ತಿದ್ದೇವೆ. ಹೀಗಾಗಿ, ಕಡಿಮೆ ಬೆಲೆಗೆ ಲ್ಯಾಪ್‌ಟಾಪ್ ಮಾರುತ್ತಿರುವುದಾಗಿ ಹೇಳಿ ವ್ಯವಹರಿಸುತ್ತಿದ್ದರು. ಇದೇ ರೀತಿ ಏಳು ಕಂಪನಿಗಳಿಗೆ ವಂಚಿಸಿದ್ದಾರೆ.
ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಸೆರೆ: ನ. 23ರಂದು ಸಿ.ವಿ.ರಾಮನ್ ನಗರದ ಸಾಫ್ಟ್ವೇರ್ ಕಂಪನಿ ಬಳಿ ವ್ಯಕ್ತಿಯೊಬ್ಬ ಲ್ಯಾಪ್‌ಟಾಪ್ ಮಾರಾಟಕ್ಕೆ ಯತ್ನಿಸುತ್ತಿದ್ದ. ಈ ಬಗ್ಗೆ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಆರೋಪಿ ಸೈಫ್, 4 ಲ್ಯಾಪ್‌ಟಾಪ್ ಸಮೇತ ಸಿಕ್ಕಿ ಬಿದ್ದಿದ್ದ. ಕೂಡಲೇ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಮೋಹಿನುದ್ದೀನ್ ಬಗ್ಗೆ ಬಾಯ್ಬಿಟ್ಟಿದ್ದ. ವೀರಣ್ಣಪಾಳ್ಯದಲ್ಲಿರುವ ಮೋಹಿನುದ್ದೀನ್ ಮನೆ ಮೇಲೆ ದಾಳಿ ನಡೆಸಿದಾಗ 25 ಲ್ಯಾಪ್ಟಾಪ್ಗಳು ಪತ್ತೆಯಾಗಿವೆ. ಹೈದರಾಬಾದ್ ಪೊಲೀಸರು ಸೈಫ್ನನ್ನು ಬಾಡಿ ವಾರಂಟ್ ಮೇಲೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.