ಭಾಷಾ ವಿವಾದಕ್ಕೆ ತಿರುಗಿದ ಪಿಡಿಒ ವರ್ಗಾವಣೆ

GP
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಗೋವಾ ಗಡಿಯಲ್ಲಿ ಕರ್ನಾಟಕದ ಕಟ್ಟಡಕಡೆಯ ಗ್ರಾಪಂ ಈಗ ಪಿಡಿಒ ವರ್ಗಾವಣೆ ವಿಚಾರವಾಗಿ ಸುದ್ದಿಯಾಗುತ್ತಿದೆ. ಹಿಂದಿನ ಪಿಡಿಒ ವರ್ಗಾವಣೆ ಖಂಡಿಸಿ ಗುರುವಾರ ಗ್ರಾಪಂ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿದ್ದಾರೆ. ಗ್ರಾಪಂ ಸದಸ್ಯರ ಕ್ರಮವನ್ನು ಖಂಡಿಸಿ, ಕರವೇ ಸದಸ್ಯರು ಜಿಪಂಗೆ ಮನವಿ ಸಲ್ಲಿಸಿದ್ದಾರೆ.
ಮಾಜಾಳಿ ಗ್ರಾಪಂಗೆ ಇದುವರೆಗೆ ಇದ್ದ ಸಾಧನಾ ಚಂಡೇಕರ್ ಎಂಬ ಪಿಡಿಒ ಅವರನ್ನು ಇತ್ತೀಚೆಗೆ ವರ್ಗಾಯಿಸಿ, ಶಿರವಾಡ ಗ್ರಾಪಂ ಪಿಡಿಒ ಅರುಣಾ ಎನ್.ಅವರನ್ನು ನೇಮಿಸಲಾಗಿತ್ತು. ಅದನ್ನು ವಿರೋಽಸಿ ಗ್ರಾಪಂ ಸದಸ್ಯರು, ಶಾಸಕರು, ಜಿಪಂ ಸಿಇಒ ಈಶ್ವರ ಕಾಂದೂ, ಜಿಲ್ಲಾಽಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದ್ದರು. ಹೊಸದಾಗಿ ನೇಮಕವಾದ ಪಿಡಿಒ ಅರುಣಾ ಎನ್. ಅವರಿಗೆ ಸ್ಥಳೀಯ ಭಾಷೆ ಕೊಂಕಣಿ ಬಾರದು, ಇದರಿಂದ ಅಭಿವೃದ್ಧಿಗೆ ತೊಂದರೆಯಾಗುತ್ತದೆ. ಸಾಧನಾ ಅವರು ವಗಾವಣೆಯಾಗಿ ಬಂದು ಕೆಲವೇ ದಿನವಾಗಿತ್ತು. ಈಗ ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದರು. ಆದರೆ, ಗ್ರಾಪಂ ಸದಸ್ಯರ ಮನವಿಗೆ ಬೆಲೆಕೊಡದ ಜಿಪಂ ಸಿಇಒ ಈಶ್ವರ ಕಾಂದೂ, `ವಿಧಾನಸಭಾ ಚುನಾವಣೆ ಸಮೀಪ ಇರುವುದರಿಂದ ಮತ್ತೆ, ಮತ್ತೆ ವರ್ಗಾವಣೆ ಅಥವಾ ರದ್ದು ಸಾಧ್ಯವಿಲ್ಲ' ಎಂದು ನಿರಾಕರಿಸಿದ್ದಾರೆ.
ಕರವೇ ಮನವಿ:
ಕರವೇ ಪ್ರವೀಣ ಶೆಟ್ಟಿ ಬಣದ ಕಾರವಾರ ತಾಲೂಕು ಘಟಕದ ಪದಾಽಕಾರಿಗಳು ಜಿಪಂ ಮುಖ್ಯ ಯೋಜನಾಽಕಾರಿ ವಿನೋದ ವಿ.ಅಣ್ವೇಕರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ. ಮಾಜಾಳಿ ಗ್ರಾಪಂ ಅಧ್ಯಕ್ಷರು, ಸದಸ್ಯರ ನಡೆಯನ್ನು ಕರವೇ ಖಂಡಿಸುತ್ತದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡದೇ ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ. ಯಾವುದೇ ಕಾರಣಕ್ಕೂ ಅರುಣಾ ಅವರನ್ನು ಬೇರೆಡೆ ವರ್ಗಾಯಿಸಬಾರದು ಎಂದಿದ್ದಾರೆ.
ಮುಖಂಡರ ಗಲಾಟೆ
ಇದೇ ಗ್ರಾಪಂ ಪಿಡಿಒ ವರ್ಗಾವಣೆ ವಿಚಾರವಾಗಿ ಮಾ. 3 ರಂದು ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ ಸೈಲ್ ನಡುವೆ ಜಿಪಂ ಸಿಸಿಒ ಛೇಂಬರ್‌ನಲ್ಲಿ ಗಲಾಟೆ ನಡೆದಿತ್ತು. ಇಬ್ಬರೂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಸತೀಶ ಸೈಲ್ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಹೊಸದಾಗಿ ನೇಮಕವಾದ ಪಿಡಿಒ ಅರುಣಾ ಅವರ ಬಗ್ಗೆ ನಮಗೆ ಯಾವುದೇ ಅಸಮಾಧಾನ, ಅಥವಾ ದ್ವೇಷವಿಲ್ಲ. ಸ್ಥಳೀಯ ಮಾತೃಭಾಷೆ ಕೊಂಕಣಿ. ಇಲ್ಲಿನ ಸದಸ್ಯರು ಹಾಗೂ ಜನರು ಕೊಂಕಣಿ ಮಾತನಾಡುತ್ತಾರೆ. ಆದರೆ, ಅರುಣಾ ಅವರಿಗೆ ಕೊಂಕಣಿ ಬಾರದ ಕಾರಣ ಗ್ರಾಪಂ ಕಾರ್ಯನಿರ್ವಹಣೆಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದೇವೆ. ಅಲ್ಲದೆ, ಹಿಂದಿನ ಪಿಡಿಒ ಸಾಧನಾ ನೇಮಕಗೊಂಡು ಹೆಚ್ಚು ದಿನವಾಗಿರಲಿಲ್ಲ. ಹೀಗೆ ಪದೇ ಪದೇ ವರ್ಗಾವಣೆ ಮಾಡುತ್ತಿದ್ದರೆ, ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಈ ಕುರಿತು ಡಿಸಿ, ಜಿಪಂ ಸಿಇಒ ಅವರಿಗೆ ಮನವಿ ಮಾಡಿದರೂ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆ ಬಹಿಷ್ಕರಿಸಿದ್ದೇವೆ.
ಕೃಷ್ಣಾ ಗೋವಿಂದ ಮಾಳ್ಸೇಕರ್
ಮಾಜಾಳಿ ಗ್ರಾಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net