

ಹಾಸನ: ಪತ್ರಿಕೋದ್ಯಮಕ್ಕೆ ಭಾಷೆಯೇ ಆಧಾರ, ಭಾಷಾ ಜ್ಞಾನದ ಜತೆಗೆ ಭಾಷೆಯ ಸೂಕ್ತ ಬಳಕೆ ಮಹತ್ವದ ವಿಷಯವಾಗಿರುತ್ತದೆ ಎಂದು ಪತ್ರಕರ್ತ ಕೆ.ಜಿ.ಸುರೇಶ್ ತಿಳಿಸಿದರು.
ನಗರದ ಆರ್.ಸಿ.ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ (ಗಂಧದ ಕೋಠಿ) ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಐಕ್ಯೂಎಸಿ ಘಟಕದ ವತಿಯಿಂದ ಆಯೋಜಿಸಿದ್ದ ಕನ್ನಡ ಪತ್ರಿಕೋದ್ಯಮದಲ್ಲಿ ಭಾಷೆಯ ಮಹತ್ವ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ವೃತ್ತಿ ಇರಲಿ ಅದರ ಬಗ್ಗೆ ನಮಗೆ ಅರಿವಿನ ಜತೆಗೆ ಆಳವಾದ ಗ್ರಹಿಕೆ ಮತ್ತು ಜ್ಞಾನವಿರಬೇಕು. ಪತ್ರಕರ್ತನಿಗೆ ಸುದ್ದಿಯ ಮಹತ್ವ ತಿಳಿಯುವುದರೊಂದಿಗೆ ಭಾಷೆಯ ಬಳಕೆ ಮಹತ್ವ ಮುಖ್ಯವಾದದ್ದು. ಯಾವುದೇ ಘಟನೆಗಳ ಸುದ್ದಿ ಮಾಡುವಾಗ ಆ ವಿಷಯದ ಬಗೆಗಿನ ಸಂದರ್ಭದೊಟ್ಟಿಗೆ ಸಮಯಪ್ರಜ್ಞೆ ಅತ್ಯವಶ್ಯ ಎಂದರು.
ಒಂದು ವಿಷಯದ ಪ್ರಾಮುಖ್ಯತೆಯನ್ನು ಅರಿತು ಆ ನಿಟ್ಟಿನಲ್ಲಿ ಸುದ್ದಿಯ ರಚನೆ ಮತ್ತು ವಿನ್ಯಾಸವನ್ನು ಪತ್ರಿಕೆಯಲ್ಲಿ ಪ್ರಕಟಿಸಬೇಕು. ಒಬ್ಬ ಪತ್ರಕರ್ತನಿಗೆ ಪ್ರತಿಯೊಂದು ವಿಷಯದ ಅರಿವಿರುವುದು ಸುದ್ದಿಯ ಆಳವನ್ನು ಅರ್ಥೈಸಲು ಸಾಧ್ಯವಾಗುತ್ತದೆ ಎಂದರು.
ಪ್ರಾಂಶುಪಾಲ ಡಿ.ಕೆ.ಮಂಜಯ್ಯ ಮಾತನಾಡಿ, ಪತ್ರಿಕಾ ವೃತ್ತಿಯಲ್ಲಿ ಒಬ್ಬ ಪತ್ರಕರ್ತ ನೈಜತೆ ಮತ್ತು ಹಲವು ಸವಾಲುಗಳನ್ನು ಮೀರಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕು. ಕನ್ನಡ ಭಾಷೆಯಲ್ಲಿ ಶಬ್ದಗಳ ಭಂಡಾರವೇ ಅಡಗಿದೆ. ಪದಪುಂಜ ಮತ್ತು ಶಬ್ದಕೋಶಗಳ ಭಂಡಾರ ನಮ್ಮ ಜತೆ ಇದ್ದಾಗ ಬರವಣಿಗೆ ಮೌಲ್ಯಯುತವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.
ಪತ್ರಕರ್ತರ ಬರವಣಿಗೆಗೆ ಪದಗಳ ಕೊರತೆ ಇರಬಾರದು, ಒಮ್ಮೆ ಸುದ್ದಿ ರಚನೆಗೆ ಕೈಹಾಕಿದರೆ ಸಾಲು ಸಾಲು ಹೊಸ ಹೊಸ ಪದಗಳನ್ನು ಜನ ಸಾಮಾನ್ಯರಿಗೆ ತಿಳಿಸಿಕೊಡುವಂತೆ ಇರಬೇಕು. ಯಾವುದೇ ಭಾಷೆಯಾದರೂ ಆ ಭಾಷೆಯಲ್ಲಿರುವ ನಾನಾ ಪದಕೋಶಗಳನ್ನು ತಿಳಿದುಕೊಳ್ಳುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಐಕ್ಯೂಎಸಿ ಘಟಕದ ಸಂಚಾಲಕಿ ಡಿ.ಜೆ.ರಮ್ಯಾ, ಇತಿಹಾಸ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಸಿ.ಎಲ್.ಶಿವಕುಮಾರ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಿ.ಸುನೀತಾ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಎಚ್.ಕೆ.ದಿಲೀಪ್‌ಕುಮಾರ್, ಸಿ.ಪಿ.ಕಾವ್ಯಾ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿಯರು ಹಾಜರಿದ್ದರು.