ಮನೆಯ ಹಿಂಬದಿ ಗುಡ್ಡದ ಮಣ್ಣು ಕುಸಿತ : ಸ್ನಾನಗೃಹ ಮನೆ ಧ್ವಂಸ : ಠಾಣೆ ಮೆಟ್ಟಿಲೇರಿದ ಪ್ರಕರಣ

New Project (27)
Published on

ಪುತ್ತೂರು ಗ್ರಾಮಾಂತರ: ಬೆಟ್ಟಂಪಾಡಿ ಗ್ರಾಮದ ಕಾನುಮೂಲೆ ಎಂಬಲ್ಲಿ ಪುಷ್ಪಲತಾ ಬಿ. ಎಂಬುವರ ಮನೆಯ ಹಿಂಬದಿಯ ಗುಡ್ಡದ ಮಣ್ಣು ಕುಸಿದು ಸ್ನಾನಗೃಹ ಸಂಪೂರ್ಣ ಹಾನಿಗೊಂಡಿದ್ದು, ಮನೆಯ ಬದಿಗೆ ಅಪಾರ ಪ್ರಮಾಣದ ಮಣ್ಣು ಬಿದ್ದಿದೆ.

ಬೆಟ್ಟಂಪಾಡಿ ಗ್ರಾಮದ ಕಾನುಮೂಲೆ ನಿವಾಸಿ ಬಚ್ಚಲು ಮನೆಯ ಮೇಲೆ ಪಕ್ಕದ ಗುಡ್ಡದ ಮಣ್ಣು ಕುಸಿದು ಬಿದ್ದಿದೆ. ಪುಷ್ಪಲತಾ ಅವರ ಮನೆಯ ಹಿಂಬದಿಯಲ್ಲಿ ಬೇರೊಬ್ಬರಿಗೆ ಸೇರಿದ ಗುಡ್ಡ ಜಾಗವಿದ್ದು, ಅವರು ಜಾಗ ಸಮತಟ್ಟುಗೊಳಿಸಿದ ಸಂದರ್ಭ ಬದಿಯಲ್ಲಿ ಮಣ್ಣನ್ನು ಹಾಗೆಯೇ ಉಳಿಸಿರುವುದರಿಂದ ವಿಪರೀತವಾಗಿ ಸುರಿದ ಮಳೆಗೆ ಆ ಮಣ್ಣು ಕುಸಿದಿದೆ.

ಮೇಲ್ಭಾಗದ ಗುಡ್ಡದ ಮಣ್ಣು ಕುಸಿದ ಪರಿಣಾಮ ಸ್ನಾನಗೃಹದ ಗೋಡೆ ಹಾನಿಗೊಂಡಿದ್ದು, ಮಾಡಿಗೆ ಅಳವಡಿಸಲಾಗಿದ್ದ ಸಿಮೆಂಟ್ ಶೀಟುಗಳು ಹುಡಿಯಾಗಿವೆ. ಮನೆ ಅಪಾಯಕಾರಿ ಸ್ಥಿತಿಯಲ್ಲಿರುವುದರಿಂದ ಪುಷ್ಪಲತಾ ಅವರು ಸಮೀಪದಲ್ಲಿರುವ ಸಹೋದರನ ಮನೆಗೆ ತಾತ್ಕಾಲಿಕವಾಗಿ ವಾಸ್ತವ್ಯ ಸ್ಥಳಾಂತರಿಸಿದ್ದಾರೆ.

ಮೂರು ವರ್ಷಗಳಿಂದ ಇದೇ ರೀತಿ ಮಣ್ಣು ಕುಸಿದು ಸಮಸ್ಯೆಯಾಗುತ್ತಿದೆ. ಈ ಕುರಿತು ಗ್ರಾಮ ಪಂಚಾಯಿತಿಗೆ ದೂರು ನೀಡಲಾಗಿದ್ದು, ರಾಶಿ ಹಾಕಿರುವ ಮಣ್ಣನ್ನು ತೆರವುಗೊಳಿಸುವಂತೆ ಪಂಚಾಯಿತಿ ವತಿಯಿಂದ ಅವರಿಗೆ ಸೂಚನೆ ನೀಡಿದ್ದರೂ ಮಣ್ಣನ್ನು ತೆರವುಗೊಳಿಸದ ಕಾರಣ ಇದೀಗ ಮತ್ತೆ ಸಮಸ್ಯೆಯಾಗಿದೆ. ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಗುಡ್ಡ ಭಾಗವನ್ನು ನಮ್ಮ ಜಾಗದ ಗಡಿಭಾಗದ ತನಕವೂ ಅಗೆದು ಬದಿಯಲ್ಲೇ ಮನೆ ನಿರ್ಮಿಸಿರುವುದರಿಂದ ಈ ಸಮಸ್ಯೆ ಆಗಿದೆಯೇ ಹೊರತು ನಮ್ಮ ತಪ್ಪಿನಿಂದ ಅಲ್ಲ ಎಂದು ನೆರೆಯ ಮನೆಯವರು ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪಂಚಾಯಿತಿಯಿಂದ ನೋಟಿಸ್

ಟನಾ ಸ್ಥಳಕ್ಕೆ ಗುರುವಾರ ಬೆಟ್ಟಂಪಾಡಿ ಪಿಡಿಒ ಸೌಮ್ಯಾ ಎಂ.ಎಸ್., ಕಾರ್ಯದರ್ಶಿ ಬಾಬು ನಾಯ್ಕ, ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಡ್ಡದ ಮಣ್ಣು ಕುಸಿಯತೊಡಗಿ ಮನೆ ಅಪಾಯದ ಸ್ಥಿತಿಯಲ್ಲಿರುವುದರಿಂದ ವಾಸ್ತವ್ಯ ಸ್ಥಳಾಂತರಿಸುವಂತೆ ಪುಷ್ಪಲತಾ ಅವರಿಗೆ ಹಾಗೂ ಕುಸಿತ ಕಂಡ ಭಾಗದಲ್ಲಿ ಇನ್ನೂ ಕುಸಿಯುವ ಸ್ಥಿತಿಯಲ್ಲಿರುವ ಮಣ್ಣನ್ನು ತೆರವುಗೊಳಿಸಿ, ಆ ಭಾಗದಿಂದ ಮಳೆನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡುವಂತೆ ಪಕ್ಕದ ಮನೆಯವರಿಗೆ ಪಂಚಾಯಿತಿ ವತಿಯಿಂದ ನೋಟಿಸ್ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net