

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುದ್ವೇಷದ ಕೊಲೆ ಪ್ರಕರಣಗಳಿಗೆ ಗುಪ್ತಚರ ಹಾಗೂ ಪೊಲೀಸ್ ಇಲಾಖೆಯಲ್ಲಿನ ಕೆಲವು ಲೋಪದೋಷಗಳೂ ಇರುವುದನ್ನು ಜನಾಭಿಪ್ರಾಯದ ಮೇಲೆ ಒಪ್ಪಿಕೊಳ್ಳುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮು ಪ್ರಚೋದನಕಾರಿ ಭಾಷಣ ಮಾಡುವವರು, ಕೋಮು ಗಲಭೆಗಳಿಗೆ ಕಾರಣವಾಗುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಗುಪ್ತಚರ ಹಾಗೂ ಪೊಲೀಸ್ ಇಲಾಖೆ ವಿಫಲ ಆಗಿರುವುದು ಹೌದು ಎಂದವರು ಹೇಳಿದರು.
ಜಿಲ್ಲೆಯಲ್ಲಿ ನಡೆದ ಘಟನೆಗಳನ್ನು ನೋಡುವಾಗ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಕೋಮು ಶಕ್ತಿಗಳ ವಿರುದ್ಧದ ರಾಜ್ಯ ಸರ್ಕಾರದ ದೃಷ್ಟಿಕೋನವನ್ನು ಪೊಲೀಸರು ಅರ್ಥ ಮಾಡಿಕೊಂಡಿಲ್ಲ ಅನ್ನಿಸುತ್ತಿದೆ. ಹೀಗಾಗಿ ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ಮಾಡುವ ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಶಾಂತಿ ಸಭೆ ನಡೆಸಿ ಮುಂದೆ ಇಂತಹ ಘಟನೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಕ್ರಮ ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಅಮಾಯಕ ಅಬ್ದುಲ್ ರಹೀಂ ಎಂಬವರ ಕೊಲೆ ಹಾಗೂ ಇನ್ನೋರ್ವ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನೋವು ತಂದಿದೆ. ಒಂದು ತಿಂಗಳ ಅವಧಿಯಲ್ಲಿ ಮೂರು ಕೊಲೆಗಳಾಗಿವೆ. ಪೊಲೀಸ್ ಇಲಾಖೆ ದ್ವೇಷ ಭಾಷಣ ಮಾಡಿ ಪ್ರಚೋದನೆ ನೀಡಿ ಇಂತಹ ಕೃತ್ಯಕ್ಕೆ ಕಾರಣವಾಗುವವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಸಂತ್ರಸ್ತ ಕುಟುಂಬದ ಮನೆಯವರನ್ನು ಇಂದು ಭೇಟಿಯಾಗಿ ಸಾಂತ್ವನ ಹೇಳಿದ್ದೇನೆ ಎಂದು ಅವರು ಹೇಳಿದರು.
ಬ್ಲಾಕ್ ಅಧ್ಯಕ್ಷರಾದ ಜೆ. ಅಬ್ದುಲ್ ಸಲೀಂ, ಪ್ರಕಾಶ್ ಸಾಲಿಯಾನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ, ಆರಿಫ್ ಬಾವ ಬಂದರ್, ವಿಕಾಸ್ ಶೆಟ್ಟಿ, ಎನ್ಎಸ್ಯಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ಪಿ. ಮನುರಾಜ್, ಭಾಸ್ಕರ ರಾವ್, ಮನಪಾ ಮಾಜಿ ಸದಸ್ಯ ಸತೀಶ್ ಪೆಂಗಲ್, ಮುಖಂಡರಾದ ನಝೀರ್ಬಜಾಲ್ ಉಪಸ್ಥಿತರಿದ್ದರು.