ಆಚಂಗಿ ಬಳಿ ರೈಲು ಹಳಿ ಮೇಲೆ ಮತ್ತೆ ಭೂ ಕುಸಿತ

ಆಚಂಗಿ ಬಳಿ ರೈಲು ಹಳಿ ಮೇಲೆ ಮತ್ತೆ ಭೂ ಕುಸಿತ
Published on

ಸಕಲೇಶಪುರ: ತಾಲೂಕಿನ ಆಚಂಗಿ ಗ್ರಾಮ ಸಮೀಪ ಶುಕ್ರವಾರ ರೈಲು ಹಳಿ ಮೇಲೆ ಮತ್ತೆ ಭೂ ಕುಸಿತ ಸಂಭವಿಸಿದ್ದರಿಂದ ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ಅನಿರ್ಧಿಷ್ಟಾವಧಿವರೆಗೆ ರದ್ದುಗೊಳಿಸಲಾಗಿದೆ. ವಾರದ ಹಿಂದೆ ಭೂಕುಸಿತ ಸಂಭವಿಸಿದ ಪ್ರದೇಶದಲ್ಲೇ ಮತ್ತೆ ಹಳಿಗಳ ಮೇಲೆ ಭೂಮಿ ಕುಸಿದ ಪರಿಣಾಮ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತಿದ್ದ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲನ್ನು ಬಾಳ್ಳುಪೇಟೆ ಬಳಿ ತಡೆಹಿಡಿಯಲಾದರೆ, ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕಾರವಾರ ಎಕ್ಸ್‌ಪ್ರೆಸ್ ರೈಲನ್ನು ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ. ಇದರಿಂದಾಗಿ ನಿಗದಿತ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪಲಾಗದೆ ಎರಡು ರೈಲಿನಲ್ಲಿದ್ದ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು.

ಕಾರ್ಯಾಚರಣೆ ಆರಂಭ: ಮಣ್ಣು ಕುಸಿತ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ನೂರಾರು ರೈಲು ಕಾರ್ಮಿಕರು ಮಣ್ಣು ತೆರವು ಕಾರ್ಯಾಚರಣೆಗೆ ಇಳಿದಿದ್ದು, ಬಿರುಸಿನ ಕಾರ್ಯಚರಣೆ ನಡೆಯುತ್ತಿದೆ. ತೆರವು ಕಾರ್ಯಚರಣೆ ಇನ್ನು ಎರಡು ದಿನಗಳ ಕಾಲ ಹಿಡಿಯಲಿದೆ ಎನ್ನಲಾಗುತ್ತಿದ್ದು, ಭೂಕುಸಿತ ಸಂಭವಿಸಿರುವ ಪ್ರದೇಶದಲ್ಲಿ ಭಾರಿ ಪ್ರಮಾಣದ ಅಂತರ್ಜಲ ಉಕ್ಕುತ್ತಿರುವುದರಿಂದ ಮತ್ತಷ್ಟು ಭೂಕುಸಿತದ ಭಯ ಅಧಿಕಾರಿಗಳನ್ನು ಕಾಡುತ್ತಿದೆ ಇದರಿಂದಾಗಿ ಅನಿರ್ಧಿಷ್ಠಾವಧಿವರೆಗೆ ಈ ಮಾರ್ಗದ ಎಲ್ಲಾ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಪರ್ಯಾಯ ವ್ಯವಸ್ಥೆ: ಹಳಿಯ ಮೇಲೆ ಭೂಕುಸಿತದಿಂದ ತಡೆಹಿಡಿಯಲಾಗಿರುವ ರೈಲು ಪ್ರಯಾಣಿಕರಿಗೆ ಹಾಸನ ಹಾಗೂ ಸಕಲೇಶಪುರ ಡಿಪೋಗಳಿಗೆ ಸೇರಿದ ಬಸ್‌ಗಳ ಮೂಲಕ ನಿಗದಿತ ಸ್ಥಳಗಳಿಗೆ ಕಳುಹಿಸಿಕೊಡಲಾಯಿತು.

ತಿಂಗಳಲ್ಲಿ 15 ದಿನ ಸಂಚಾರವಿಲ್ಲ: ಶಿರಾಡಿಘಾಟ್‌ನಲ್ಲಿ ರೈಲು ಹಳಿಯ ತಳಪಾಯ ಕುಸಿದಿದ್ದರಿಂದ ಜುಲೈ 27 ರಿಂದ ಆಗಸ್ಟ್ 7 ರವರಗೆ ಸಂಚಾರ ತಡೆಹಿಡಿಯಲಾಗಿದ್ದು, ಅಗಸ್ಟ್ 8ರಿಂದ ಸಂಚಾರ ಆರಂಭಿಸಲಾಗಿತ್ತು. ಆಗಸ್ಟ್ 11 ರಂದು ಆಚಂಗಿ ಸಮೀಪ ಹಳಿಯ ಮೇಲೆ ಗುಡ್ಡ ಕುಸಿತ ಸಂಭವಿಸಿದ್ದರಿಂದ ಮತ್ತೆ ರೈಲು ಸಂಚಾರ ಬಂದ್ ಮಾಡಲಾಗಿದ್ದು, ಆಗಸ್ಟ್ 14 ರಂದು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ರೈಲುಗಳು ಸಂಚಾರ ಆರಂಭಿಸಿದ ಒಂದು ದಿನದಲ್ಲೇ ಮತ್ತೆ ಭೂಕುಸಿತದಿಂದ ಸಂಚಾರ ತಡೆಹಿಡಿಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net