ದಾಖಲೆ ಸಲ್ಲಿಸದ ಭೂಸಂತ್ರಸ್ತರು!: ರಾ.ಹೆ. 73 ಅಭಿವೃದ್ಧಿ ಕಾಮಗಾರಿ ಸಲ್ಲಿಕೆಗೆ 170 ಮಂದಿ ಮೀನಮೇಷ

New Project (28)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಮಂಗಳೂರು - ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ನಡೆಯುತ್ತಿದ್ದು, ರಸ್ತೆ ವಿಸ್ತರಣೆ ವೇಳೆ ಜಾಗ ಕಳೆದುಕೊಳ್ಳಲಿರುವ, ಈಗಾಗಲೇ ಜಾಗ ಕಳೆದುಕೊಂಡಿರುವ ಸುಮಾರು 170 ಮಂದಿ ಇನ್ನೂ ಸಂಬಂಧಪಟ್ಟ ಇಲಾಖೆಗೆ ದಾಖಲೆ ಸಲ್ಲಿಸಿಲ್ಲ. 35 ಕಿ.ಮೀ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಕುಕ್ಕಳ, ಮದ್ದಡ್ಕ, ಮಾಲಾಡಿ, ಕುವೆಟ್ಟು, ಬೆಳ್ತಂಗಡಿ, ಉಜಿರೆ, ಕಲ್ಮಂಜ, ಮುಂಡಾಜೆ, ಚಿಬಿದ್ರೆ, ಚಾರ್ಮಾಡಿ ಮೊದಲಾದ ಗ್ರಾಮಗಳನ್ನು ಒಳಗೊಂಡಿದೆ. ರಸ್ತೆ ವಿಸ್ತರಣೆ ವೇಳೆ ಸುಮಾರು 660 ಮಂದಿ ಭೂಮಿ ಕಳೆದುಕೊಳ್ಳುವ ಬಗ್ಗೆ ಇಲಾಖೆ ಈಗಾಗಲೇ ಗುರುತಿಸಿದೆ. ಇದರಲ್ಲಿ ಸರಿಯಾದ ದಾಖಲೆ ನೀಡಿರುವ 230 ಮಂದಿಗೆ 55 ಕೋಟಿ ರೂ.ಗಿಂತ ಅಧಿಕ ಪರಿಹಾರ ಮೊತ್ತವನ್ನು ಈಗಾಗಲೇ ಜಮಾ ಮಾಡಲಾಗಿದೆ. 45 ಸ್ಥಳಗಳಲ್ಲಿ ಕಾನೂನು ತೊಡಕುಗಳಿರುವ ಕಾರಣದಿಂದ ಪರಿಹಾರ ಮೊತ್ತವನ್ನು ನ್ಯಾಯಾಲಯದ ಮೂಲಕ ಜಮೆ ಮಾಡಲು ಆದೇಶ ಹೊರಡಿಸಲಾಗಿದೆ. ಆಯಾ ಗ್ರಾಮದ ಭೌಗೋಳಿಕ ಲೆಕ್ಕಾಚಾರದ ಪ್ರಕಾರ ಸಂತ್ರಸ್ತರ ಖಾತೆಗೆ ಪರಿಹಾರ ಮೊತ್ತ ಜಮೆಯಾಗುತ್ತದೆ. ಅರ್ಜಿ ಸಲ್ಲಿಸಿದವರ ದಾಖಲೆಗಳ ಪರಿಶೀಲನೆ ನಡೆದು ಇದರಲ್ಲಿ ಯಾವುದೇ ರೀತಿಯ ತೊಡಕು ಕಂಡುಬರದಿದ್ದಲ್ಲಿ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಪರಿಹಾರ ಮೊತ್ತ ಸಂತ್ರಸ್ತರ ರಾಷ್ಟ್ರೀಕೃತ ಬ್ಯಾಂಕ್‌ನ ಉಳಿತಾಯ ಖಾತೆಗೆ ಜಮೆಯಾಗುತ್ತದೆ. ಹಲವಾರು ಬಾರಿ ಪ್ರಕಟಣೆ, ನೋಟಿಸ್! ಹಲವಾರು ಬಾರಿ ಪ್ರಕಟಣೆ, ನೋಟಿಸ್ ನೀಡಿದರೂ ಇನ್ನೂ 170 ಮಂದಿಭೂ ಸಂತ್ರಸ್ತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವುದಾಗಲಿ, ದಾಖಲೆಗಳನ್ನು ನೀಡುವುದಾಗಲಿ ಮಾಡಿಲ್ಲ. ಅವರಿಗೆ ಈಗಾಗಲೇ ಅಂತಿಮ ಹಂತದ ನೋಟಿಸ್ ಕಳುಹಿಸಲಾಗಿದೆ. ದಾಖಲೆಗಳನ್ನು ನೀಡಲು ಸುಲಭವಾಗುವ ದೃಷ್ಟಿಯಿಂದ ಕಚೇರಿ ತೆರೆಯಲಾಗಿದ್ದು, ಮಂಗಳೂರಿಗೆ ಓಡಾಡುವ ಪ್ರಮೇಯ ತಪ್ಪಿದೆ. ಇಷ್ಟಾದರೂ ಇನ್ನೂ 170 ಮಂದಿ ದಾಖಲೆಗಳನ್ನೇ ನೀಡಿಲ್ಲ. ಅವರು ದಾಖಲೆಗಳನ್ನು ನೀಡದಿರುವುದರಿಂದ ಪರಿಹಾರದ ಪ್ರಕ್ರಿಯೆಗಳು ತ್ವರಿತವಾಗಿ ಸಾಗಲು ಅಡ್ಡಿಯಾಗಿದೆ. ಭೂಸಂತ್ರಸ್ತರ ಅವಗಾಹನೆಗಾಗಿ ರಾಷ್ಟ್ರೀಯ ಹೆದ್ದಾರಿ ಬದಿ ಅಲ್ಲಲ್ಲಿ ಸೂಚನಾ ಫಲಕವನ್ನು ರಾಷ್ಟ್ರೀಯ ಹೆದ್ದಾರಿ ವಿಭಾಗ ಮಂಗಳೂರು ವತಿಯಿಂದ ಹಾಕಲಾಗಿದ್ದು, ಇದರಲ್ಲಿ ಸ್ಪಷ್ಟ ಸೂಚನೆಗಳನ್ನು ನಮೂದಿಸಲಾಗಿದೆ. ನಡೆದಿದೆ ಕಾಮಗಾರಿ 35 ಕಿ.ಮೀ ವ್ಯಾಪ್ತಿಯ ಈ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಖಾಸಗಿ ಜಾಗಗಳಲ್ಲಿ ರಸ್ತೆ ವಿಸ್ತರಣೆ ನಡೆದಿದೆ. ಪೇಟೆ ಪ್ರದೇಶಗಳನ್ನು ಹೊರತುಪಡಿಸಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಪ್ರಸ್ತುತ ಮಳೆಯಿಂದ ಕಾಮಗಾರಿಗೆ ಕೊಂಚ ವಿರಾಮ ಸಿಕ್ಕಿದೆ. ಮಳೆ ಕಡಿಮೆಯಾದ ಕೂಡಲೇ ಮತ್ತೆ ಕಾಮಗಾರಿ ಮುಂದುವರಿಯಲಿದೆ. ಕಳೆದ ಎರಡು ವರ್ಷಗಳಿಂದ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಕಳೆದ ವರ್ಷ ಹಲವಾರು ಅವಾಂತರಗಳನ್ನು ಸೃಷ್ಟಿಸಿತ್ತು. ಈ ಬಾರಿ ಮಳೆಗೆ ಕಾಮಗಾರಿ ಪೂರ್ಣಗೊಳ್ಳದ ಕಡೆ ಒಂದಿಷ್ಟು ಸಮಸ್ಯೆಗಳು ಕಂಡುಬರುತ್ತವೆ.

ದಾಖಲೆಗಳನ್ನು ನೀಡಲು ಬಾಕಿ ಇರುವ 170 ಮಂದಿಗೆ ಈಗಾಗಲೇ ಅಂತಿಮ ಹಂತದ ನೋಟಿಸ್ ನೀಡಲಾಗಿದೆ. ಇವರು ಆಗಸ್ಟ್ ತಿಂಗಳ ಕೊನೆಯ ವಾರದೊಳಗೆ ಅಗತ್ಯ ದಾಖಲೆ ಅಥವಾ ಅರ್ಜಿ ಸಲ್ಲಿಸದಿದ್ದರೆ ಇದನ್ನು ನ್ಯಾಯಾಲಯದ ಮೂಲಕ ಪರಿಹರಿಸಿಕೊಳ್ಳಬೇಕಾಗುತ್ತದೆ. ಹರ್ಷವರ್ಧನ್ , ರಾ.ಹೆ. 73 ಮಂಗಳೂರು ವಿಶೇಷ ಭೂಸ್ವಾಧೀನಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net