ಗೌರಿಬಿದನೂರು: ಜಮೀನು ಸರ್ವೇ ವಿಚಾರದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂಮಾಪಕ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಭೂಮಾಪಕ ಹರೀಶ್ ರೆಡ್ಡಿ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿರುವ ಭೂಮಾಪಕ. ಹಳೇ ಉಪ್ಪಾರಹಳ್ಳಿ ಗ್ರಾಮದ ಮುದ್ದಗಂಗಮ್ಮ ನಗರದ ಸಾಯಿಬಾಬಾ ದೇವಸ್ಥಾನದ ಬಳಿ ಮುಕ್ಕಾಲು ಗುಂಟೆ ಜಮೀನನ್ನು ಪೋಡಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ, ಹರೀಶ್ ರೆಡ್ಡಿ ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದ. ಕೆಲಸ ಮಾಡಿಕೊಡಲು 25 ಸಾವಿರ ರೂ. ಲಂಚಕ್ಕೆ ಬೇಡಿಕೆಯಿರಿಸಿದ್ದ. ಮುಂಗಡವಾಗಿ 3 ಸಾವಿರ ರೂ. ಪಾವತಿಸಿದ್ದ ಮುದ್ದಗಂಗಮ್ಮ ಬಳಿಕ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಗುರುವಾರ ಸಂಜೆ ನಗರದ ಎಲ್ಐಸಿ ಕಚೇರಿಯ ಬಳಿಯ ನಂದಿನಿ ಹಾಲಿನ ಟಕದ ಬಳಿ 20 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡು ಹರೀಶ್ ರೆಡ್ಡಿಯನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಲೋಕಾಯುಕ್ತ ಎಸ್.ಪಿ ಆಂತೋನಿ ಜಾನ್, ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೀರೇಂದ್ರ ಕುಮಾರ್, ವೃತ್ತ ನಿರೀಕ್ಷಕರಾದ ಶಿವರಾಜ್ ಕುಮಾರ್, ನಿರ್ಮಲಾ, ಲೋಕಾಯುಕ್ತ ಸಿಬ್ಬಂದಿಗಳಾದ ಗುರು ರಾಮಚಂದ್ರ ಲಿಂಗರಾಜು ಅರುಣ್ ಕುಮಾರ್,
ನಾಗರಾಜು, ಪ್ರಕಾಶ್ ನೇತೃತ್ವದ ತಂಡ ದಾಳಿ ನಡೆಸಿತು.