

ಬೆಂಗಳೂರು: ಬೋಗಸ್ ದಾಖಲೆ ತಡೆಗೆ, ಸರ್ಕಾರಿ ಕಚೇರಿಗಳಿಗೆ ರೈತರ ಅಲೆದಾಟ ತಪ್ಪಿಸುವುದೂ ಸೇರಿ ಇತರೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ, ‘ಭೂ ಸುರಕ್ಷಾ’ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ.
ಕೆ.ಜಿ.ರಸ್ತೆಯ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ದಶಕಗಳಿಂದ ಭೂ ಮಂಜೂರಾತಿಗೆ ಸಂಬಂಧಿಸಿದ ಮೂಲ ದಾಖಲೆ ಬಚ್ಚಿಡುವ, ತಿದ್ದುವ ಮೂಲಕ ರೈತರನ್ನು ಶೋಷಿಸಲಾಗುತ್ತಿದೆ. ಸರ್ಕಾರಿ ಕಚೇರಿ, ಕೋರ್ಟ್‌ಗೆ ಅಲೆಸಲಾಗುತ್ತಿದೆ. ಮಧ್ಯವರ್ತಿಗಳೂ ಸಹ ಅನ್ನದಾತರನ್ನು ಶೋಷಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡುವುದು ಮತ್ತು ಜನರಿಗೆ ಸುಲಭವಾಗಿ ದಾಖಲೆ ಲಭ್ಯವಾಗಬೇಕೆಂಬ ಆಶಯದಿಂದ ‘ಭೂಸುರಕ್ಷಾ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ರಾಜ್ಯದ ಎಲ್ಲ ತಹಶೀಲ್ದಾರ್ ಕಚೇರಿಗಳಲ್ಲಿ ಅಂದಾಜು 100 ಕೋಟಿ ಅಧಿಕ ಭೂ ದಾಖಲೆಗಳಿವೆ. ಈ ಪೈಕಿ 35.36 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇನ್ನೂ 35 ಕೋಟಿ ಪುಟಗಳು ಸ್ಕ್ಯಾನ್ಗೆ ಬಾಕಿ ಇದೆ. ಈ ಕೆಲಸ ತಹಶೀಲ್ದಾರ್ ಕಚೇರಿಗಷ್ಟೇ ಸೀಮಿತವಾಗದೆ ಉಪ ವಿಭಾಗಾಧಿಕಾರಿ(ಎಸಿ) ಮತ್ತು ಡಿಸಿ ಕಚೇರಿಯಲ್ಲಿರುವ ದಾಖಲೆಗಳನ್ನೂ ಸ್ಕ್ಯಾನ್ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಮೂಲ ದಾಖಲೆ ಸ್ಕ್ಯಾನ್ ಮಾಡುವ ಮೂಲಕ ಇದಕ್ಕೆ ಚಾಲನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಮತ್ತು ಆಯುಕ್ತ ಸುನೀಲ್ ಕುಮಾರ್, ಬೆಂಗಳೂರು ನಗರ ಡಿಸಿ ಜಿ. ಜಗದೀಶ್ ಮತ್ತಿತರರಿದ್ದರು.
ವರ್ಷಾಂತ್ಯದೊಳಗೆ ಸ್ಕ್ಯಾನಿಂಗ್ ಪೂರ್ಣ:
ರಾಜ್ಯದ ಎಲ್ಲ ತಹಶೀಲ್ದಾರ್ ಕಚೇರಿಗಳಲ್ಲಿ ಪ್ರತಿನಿತ್ಯ ಸರಾಸರಿ 10 ಸಾವಿರ ಪುಟಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ವೇಗ ನೀಡಲಾಗುವುದು. ಡಿಸೆಂಬರ್‌ದೊಳಗೆ ಎಲ್ಲ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುವುದು.2026 ಮಾರ್ಚ್ ವೇಳೆಗೆ ಎಸಿ ಕಚೇರಿ ರೆಕಾರ್ಡ್ ರೂಂನಲ್ಲಿರುವ ದಾಖಲೆಗಳನ್ನು ಸ್ಕ್ಯಾನಿಂಗ್ ಕಾರ್ಯ ಮುಗಿಸುವುದಾಗಿ ಕೃಷ್ಣ ಬೈರೇಗೌಡ ವಿವರಿಸಿದರು. ಬೆಂಗಳೂರು ಸುತ್ತಮುತ್ತ ಆನೇಕ ಜಾಗವನ್ನು ಕಬಳಿಸಲು ನಕಲಿ ದಾಖಲೆ ಸೃಷ್ಟಿಸಲಾಗಿದೆ. ಈ ಕೃತ್ಯದಲ್ಲಿ ಕೆಲ ಅಧಿಕಾರಿಗಳ ಕೈವಾಡವೂ ಇದೆ.ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ನಷ್ಟ ಉಂಟಾಗಿದೆ. ಇಂತಹ ನಕಲಿ ದಾಖಲೆಗಳ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ನಮಗೆ ಸತತ ಸೋಲಾಗುತ್ತಿದೆ. ಹಿಂದೆ ಆಗಿರುವ ನಕಲಿ ವ್ಯವಹಾರಗಳಿಗೆ ಸೋತು ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಹಾಗಾಗಿ, ದಾಖಲೆಗಳು ನಕಲಿ ಎಂದು ಗೊತ್ತಾದರೆ ಕೂಡಲೇ ಪೋರೆನ್ಸಿಕ್ ಇಲಾಖೆ ನೀಡುವ ಮೂಲಕ ತನಿಖೆ ಮಾಡಲಾಗುವುದು. ಎಫ್ಎಸ್ಎಲ್ ತಂಡ ಅಧ್ಯಯನಕ್ಕೆ ಪ್ರಾಯೋಗಿಕ ಕೊಠಡಿಗೆ (ಲ್ಯಾಬ್) ಅನುದಾನ ನೀಡಲು ಸಿದ್ಧರಿದ್ದೇವೆ. ಬೋಗಸ್ ದಾಖಲೆ ಎಂದು ತಿಳಿದರೆ ಸುಪ್ರೀಂಕೋರ್ಟ್‌ನಲ್ಲೂ ಹೋರಾಟ ನಡೆಸಲಾಗುವುದು ಎಂದು ಸಚಿವರು ಹೇಳಿದರು.
ಯೋಜನೆ ಅನುಕೂಲಗಳೇನು?
* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಡಿಜಿಟಲೀಕರಿಸಿದ ದಾಖಲೆ ಪಡೆಯಬಹುದು
* ಸರ್ಕಾರಿ ಕಚೇರಿಗೆ ತೆರಳದೆ ಮನೆಯಿಂದಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಗೊತ್ತಿಲ್ಲದಿದ್ದರೆ ಸಮೀಪದ ನಾಡ ಕಚೇರಿ ಅಧಿಕಾರಿಗಳ ಸಹಾಯ ಪಡೆಯಲು ಅವಕಾಶ
*ಸ್ಥಳೀಯರ ಜನರ ಅನುಕೂಲಕ್ಕೆ ಮಂಗಳವಾರದಿಂದಲೇ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅನುಮೋದನೆ
* ಭೂ ಕಬಳಿಕೆದಾರರು ಬೋಗಸ್ ದಾಖಲೆ ಸೃಷ್ಟಿಸಲು ಕಡಿವಾಣ
* ಇನ್ನುಮುಂದೆ ಸಾರ್ವಜನಿಕ ಆಸ್ತಿ ಲಪಾಟಯಿಸಲು ಆಗಲ್ಲ
* ಆಸ್ತಿ ಕಬಳಿಕೆಗೆ ದಂಧೆಗೆ ಭೂ ಸುರಕ್ಷಾ ಯೋಜನೆ ಕಡಿವಾಣ
* ಸಾರ್ವಜನಿಕರ ಆಸ್ತಿ ಉಳಿಸಲು ಅನುಕೂಲ
* ಕೋಟ್ಯಂತರ ರೂ.ಮೌಲ್ಯದ ಭೂಮಿ ಕಬಳಿಕೆಗೆ ಬೀಳುತ್ತೆ ಬ್ರೇಕ್