

ಗೌರಿಬಿದನೂರು: ಎಂಟು ತಿಂಗಳಲ್ಲಿ ತಾಲೂಕಿನ ಎಲ್ಲ ಭೂದಾಖಲೆಗಳು ಗಣಕೀಕರಣಗೊಳ್ಳಲಿವೆ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಹೇಳಿದರು.
ನಗರದ ಹೊರವಲಯದ ಮಿನಿ ವಿಧಾನಸೌಧದಲ್ಲಿ ಕಂದಾಯ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ಹಳೆಯ ಭೂ ದಾಖಲೆಗಳ ಗಣಕೀಕರಣ ಮತ್ತು ಕಸಬಾ ಹೋಬಳಿ ವ್ಯಾಪ್ತಿಯ ಪೌತಿ ಖಾತೆ ಅಂದೋಲನ, ಪಿಂಚಣಿ ಅದಾಲತ್ ಉದ್ಘಾಟಿಸಿ ಮಾತನಾಡಿದರು.
ಹಲವಾರು ವರ್ಷಗಳ ಹಳೆಯ ಭೂಮಿಯ ದಾಖಲೆಗಳನ್ನು ಹೊಂದಿರುವ ರೈತರು ಪ್ರಮುಖ ಪತ್ರಗಳು ನಾಶವಾಗಿ ಮತ್ತೆ ಅವುಗಳನ್ನು ಪಡೆಯಲು ತಾಲೂಕು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿಯಿದೆ. ಇವೆಲ್ಲ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ಹಳೆಯ ಭೂ ದಾಖಲೆಗಳನ್ನು ಗಣಕೀಕರಣದ ಮೂಲಕ ರೈತರಿಗೆ ದಾಖಲೆಗಳನ್ನು ಸುರಕ್ಷಿತವಾಗಿರಿಸುವ ಜತೆಗೆ ಸುಲಭವಾಗಿ ದೊರೆಯುವಂತೆ ಮಾಡಿದೆ. ಭೂ ಮಾಲೀಕರ ದೃಷ್ಟಿಯಿಂದ ಇದೊಂದು ಉತ್ತಮ ಯೋಜನೆಯಾಗಿದೆ. ತಾಲೂಕಿನ ರೈತ ಬಾಂಧವರು ಈ ಯೋಜನೆಯ ಉಪಯೋಗಗಳನ್ನು ಅರಿತು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಮಹೇಶ್ ಎಸ್. ಪತ್ರಿ, ಗ್ರೇಡ್ 2 ತಹಸೀಲ್ದಾರ್ ಆಶಾ, ಕಂದಾಯ ಅಧಿಕಾರಿಗಳಾದ ಕಬೀರ್, ಖಾದರ್, ರವಿ, ಅಮರ್, ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು, ಚುನಾಯಿತ ಜನಪ್ರತಿನಿಧಿಗಳು, ಕಾರ್ಯಕರ್ತರು, ಉಪಸ್ಥಿತರಿದ್ದರು.