

ಕಾಂತರಾಜ್‌ಹೊನ್ನೇಕೋಡಿ ಸಕಲೇಶಪುರ
ಕಾಫಿ ಧಾರಣೆ ಹೆಚ್ಚಾದಂತೆ ತಾಲೂಕಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ತನ್ನ ಆಯಾಮವನ್ನೇ ಬದಲಿಸಿದೆ. ಬೆಳೆಗಾರರ ನಿರೀಕ್ಷೆಗೂ ಮೀರಿ ಕಾಫಿ ಧಾರಣೆ ಹೆಚ್ಚಳವಾಗುತ್ತಿದ್ದಂತೆ ಕಾಫಿ ತೋಟಗಳನ್ನು ಕೊಂಡುಕೊಳ್ಳಲು ಹೆಚ್ಚಿನವರು ಆಸಕ್ತಿ ವಹಿಸುತ್ತಿದ್ದಾರೆ. ಆದರೆ, ಜಮೀನನ್ನು ಮಾರಲು ಯಾರೂ ಆಸಕ್ತಿ ವಹಿಸುತ್ತಿಲ್ಲ. ಮಾರಾಟ ಮಾಡುವ ಜಮೀನುಗಳ ಕೊರತೆ ಎದುರಾಗಿರುವುದರಿಂದ ಕಾಫಿ ತೋಟಗಳಿಗೆ ಬಾರಿ ಬೇಡಿಕೆ ಸೃಷ್ಟಿಯಾಗಿದೆ.
ಕರೊನಾ ಆವರಿಸುವ ಮೊದಲು ಒಂದು ಎಕರೆ ಕಾಫಿ ತೋಟಕ್ಕೆ ನೀರು, ರಸ್ತೆಯ ಅನುಕೂಲದ ಆಧಾರದ ಮೇಲೆ 10 ಲಕ್ಷದಿಂದ 25 ಲಕ್ಷ ರೂ. ಇತ್ತು. ಅಂದು ಕೊಳ್ಳುವವರಿಗಿಂತ ಮಾರುವವರ ಸಂಖ್ಯೆ ಅಧಿಕವಾಗಿತ್ತು. ಎರಡು ವರ್ಷದಿಂದ ಕಾಫಿ ದರ ಏರುಗತಿಯಲ್ಲಿ ಸಾಗುತ್ತಿರುವುದರಿಂದ ತಾಲೂಕಿನಲ್ಲಿ ತೋಟಗಳನ್ನು ಮಾರುವುದಕ್ಕಿಂತ ಕೊಳ್ಳುವವರ ಸಂಖ್ಯೆ ಅಧಿಕವಾಗಿದೆ. ಇದರಿಂದಾಗಿ ಕಾಫಿ ತೋಟಗಳ ದರ ಕೂಡ ಊಹೆಗೂ ನಿಲುಕದಂತೆ ಏರಿಕೆ ಕಾಣುತ್ತಿದೆ. ಸದ್ಯ ಉತ್ತಮ ರಸ್ತೆ ಸಂಪರ್ಕ, ನೀರಿನ ವ್ಯವಸ್ಥೆ ಹಾಗೂ ಉತ್ತಮ ಸ್ಥಿತಿಯಲ್ಲಿರುವ ತೋಟದ ಬೆಲೆ 60 ಲಕ್ಷದಿಂದ ಒಂದು ಕೋಟಿ ರೂ. ವರೆಗೆ ಏರಿಕೆ ಕಂಡಿದೆ.
ಪಟ್ಟಣದ ಸುತ್ತಮುತ್ತಲಿನ ಹಾಗೂ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಆಸುಪಾಸಿನ ಕಾಫಿತೋಟಗಳ ಬೆಲೆ ಗುಂಟೆಗಳ ಲೆಕ್ಕದಲ್ಲಿ ಮಾರಾಟಮಾಡುತ್ತಿದ್ದು, ಎಕರೆಗೆ 1 ಕೋಟಿಯಿಂದ 3 ಕೋಟಿ ರೂಗಳವರೆಗೂ ಬೆಲೆ ಬಾಳುತ್ತಿದೆ.
ಮೂರು ಪಟ್ಟು ಹೆಚ್ಚಳ: 2020-21ರಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಕಾಫಿತೋಟಗಳ ದರ ಪ್ರತಿ ಎಕರೆಗೆ 15 ರಿಂದ 25 ಲಕ್ಷ ರೂ.ಗಳಷ್ಟಿತ್ತು. ಸದ್ಯ ಎಕರೆಗೆ 40 ರಿಂದ 60 ಲಕ್ಷ ರೂ.ಗಳ ವರೆಗೆ ಮಾರಾಟವಾಗುತ್ತಿದೆ. ಕೇವಲ 3 ವರ್ಷಗಳಲ್ಲಿ ಮೂರು ಪಟ್ಟು ದರದಲ್ಲಿ ಹೆಚ್ಚಳವಾಗಿದೆ.
ದಿಣ್ಣೆಗಳಿಗೂ ಇದೆ ದರ: ಸದ್ಯ ಕಾಫಿ ಧಾರಣೆ ಏರಿಕೆಯಾಗುತ್ತಿರುವುದರಿಂದ ದಿಣ್ಣೆಗಳೆಲ್ಲ ಕಾಫಿತೋಟಗಳಾಗಿ ರೂಪಾಂತರಗೊಳ್ಳುತ್ತಿವೆ. ಇದರಿಂದಾಗಿ ತಾಲೂಕಿನ ಪ್ರಾಕೃತಿಕ ಸೌಂದರ್ಯದ ಕೊಂಡಿಯಾಗಿದ್ದ ದಿಣ್ಣೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅದರಲ್ಲೂ ತಾಲೂಕಿನಲ್ಲಿ ಮಾರಾಟವಾಗುವ ದಿಣ್ಣೆಗಳ ಸಂಖ್ಯೆ ಸೂನ್ಯ ಎಂದರೆ ತಪ್ಪಿಲ್ಲ. ದಿಣ್ಣೆಗಳು ಪ್ರತಿ ಎಕರೆಗೆ 40 ರಿಂದ 60 ಲಕ್ಷ ರೂ.ವರೆಗೂ ಮಾರಾಟವಾಗುತ್ತಿದ್ದು, ದಿಣ್ಣೆ ಜಾಗಗಳನ್ನು ಖರೀದಿಸುವವರು ಬಹುತೇಕ ರೆಸಾರ್ಟ್ ಹಾಗೂ ಹೋಂಸ್ಟೇ ಸ್ಥಾಪಿಸುವ ಉದ್ದೇಶ ಹೊಂದಿದ್ದವರಾಗಿದ್ದಾರೆ. ಉತ್ತಮ ಪ್ರಕೃತಿ ಸೌಂದರ್ಯ ಹೊಂದಿರುವ ದಿಣ್ಣೆಗಳಿಗೆ ಬಾರಿ ಬೇಡಿಕೆ ಇದೆಯಾದರೂ ಜಮೀನಿನ ಕೊರತೆ ಸಾಕಷ್ಟು ಕಾಡುತ್ತಿದೆ.
ಏರಿಕೆಯಾಗದ ಸರಾಸರಿ ದರ: ಪ್ರತಿ ಎಕರೆ ಭೂಮಿ ದರ ನಿರೀಕ್ಷೆಗೂ ಮೀರಿ ಹೆಚ್ಚಿದ್ದರೂ ಸರ್ಕಾರದ ಸರಾಸರಿ ದರ ಏರಿಕೆಯಾಗಿಲ್ಲ. ನೋಂದಣಿ ಇಲಾಖೆಯಲ್ಲಿ ಪ್ರತಿ ಎಕರೆ ಭೂಮಿ ಮಾರುಕಟ್ಟೆ ದರ ಆಯಾ ಹೋಬಳಿಗಳಿಗೆ ಅನುಗುಣವಾಗಿ ಇಂದಿಗೂ 4 ರಿಂದ 15 ಲಕ್ಷ ರೂ.ನಲ್ಲೇ ಇದೆ.
ಸಣ್ಣ ಜಮೀನಿಗೆ ಬಾರಿ ಬೇಡಿಕೆ: ಕಾಫಿ ಧಾರಣೆ ಏರಿಕೆಯಿಂದ ಉತ್ತಮ ವಾತಾವರಣ ಹೊಂದಿರುವ ಸಕಲೇಶಪುರ ತಾಲೂಕಿನಲ್ಲಿ ಭೂಮಿ ಕೊಳ್ಳಲು ಜನರು ಮುಗಿಬೀಳುತ್ತಿದ್ದು 2 ರಿಂದ 10 ಎಕರೆ ಜಮೀನಿಗೆ ಬಾರಿ ಬೇಡಿಕೆ ಸೃಷ್ಟಿಯಾಗಿದೆ. ಸದ್ಯ ಸಣ್ಣ ಜಮೀನಿನ ಕೊರತೆ ಹೆಚ್ಚಿದ್ದು ಸಣ್ಣ ಜಮೀನುಗಳಿಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅಧಿಕ ದರ ಸೂಚಿಸಲಾಗುತ್ತಿದೆ.
ಸಕಲೇಶಪುರ ಅಚ್ಚುಮೆಚ್ಚು: ರಾಜಧಾನಿ ಬೆಂಗಳೂರಿನಿಂದ ತಾಲೂಕಿಗೆ 3 ಗಂಟೆಯ ಪ್ರಯಾಣ ಹಾಗೂ ಉತ್ತಮ ರಸ್ತೆ ಸಂಪರ್ಕ ಇರುವುದರಿಂದ ಕೊಳ್ಳುವವರಿಗೆ ತಾಲೂಕು ಅಚ್ಚುಮೆಚ್ಚಿನ ತಾಣವಾಗಿದೆ. ಇದು ಕೂಡ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಶಕ್ತಿ ತುಂಬಿದೆ. ಆದರೆ, ಪ್ಲಾಂಟೇಷನ್ ಜಮೀನುಗಳನ್ನು ಮನಬಂದಂತೆ ವಿಭಜಿಸುವಂತಿಲ್ಲ ಎಂಬ ಸರ್ಕಾರದ ಸುತ್ತೋಲೆ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅಡ್ಡಿಯಾಗಿ ಪರಿಣಮಿಸಿದ್ದು, ತಾಲೂಕಿನಲ್ಲಿ ಪ್ಲಾಂಟೇಷನ್ ಜಮೀನುಗಳನ್ನು ವಿಭಜಿಸಿ ಸಣ್ಣ ಜಮೀನುಗಳನ್ನಾಗಿ ವಿಂಗಡಿಸಿ ಮಾರಾಟ ಮಾಡುವ ಯೋಜನೆಗಳು ಸದ್ಯ ಅರ್ಧಕ್ಕೆ ನಿಂತಿದ್ದು, ಸರ್ಕಾರದ ಈ ಸುತ್ತೋಲೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯ ಕೇಳಿಬಂದಿದೆ.
---
ಕೋಟ್..
ಕಾಫಿ ದರದಲ್ಲಿ ಹೆಚ್ಚಳ ಕಂಡಿರುವುದರಿಂದ ತಾಲೂಕಿನಲ್ಲಿ ಎರಡು ವರ್ಷದಿಂದ ಭೂಮಿಯ ಬೆಲೆಯೂ ಹೆಚ್ಚಳ ಕಂಡಿದೆ. ಸದ್ಯ ತುಂಡು ಭೂಮಿ ಹೊಂದಿರುವವರು ಭೂಮಿಯನ್ನು ಮಾರಾಟ ಮಾಡಲು ಹಿಂಜರಿಯುತ್ತಿದ್ದಾರೆ.
ಬೆಕ್ಕನಹಳ್ಳಿ ನಾಗರಾಜ್
ಕಾಫಿ ಬೆಳೆಗಾರರು
----
ಸದ್ಯ ಭೂಮಿಯ ಬೆಲೆ ಹೆಚ್ಚಳವಾಗಿದ್ದು, ಸಾಮಾನ್ಯರು ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಭೂಮಿಯ ಮೇಲೆ ಬಂಡವಾಳ ಹಾಕಿದವರಿಗೆ ಸದ್ಯ ಅಧಿಕ ಲಾಭ ದೊರಕುತ್ತಿದೆ. ಸದ್ಯ ಭೂಮಿಯನ್ನು ಮಾರಾಟ ಜನರು ಹಿಂಜರಿಯುತ್ತಿದ್ದಾರೆ.
ವೈ.ಪಿ. ರಾಜೇಗೌಡ
ರಿಯಲ್ ಎಸ್ಟೇಟ್ ಉದ್ಯಮಿ
ಚಿತ್ರ: