

ಚಿಂತಾಮಣಿ: ರೈತರು, ದೇವಾಲಯ, ಶಾಲೆ ಹಾಗೂ ಮಠಗಳ ಆಸ್ತಿಗಳನ್ನು ರಾಜ್ಯ ಸರ್ಕಾರ ವಕ್ಫ್ ಬೋರ್ಡ್‌ಗೆ ನೀಡುತ್ತಿದೆ ಎಂದು ಆರೋಪಿಸಿ ಬಿಜೆಪಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ರಾಜೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಕಚೇರಿ ಎದುರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ವೇಣುಗೋಪಾಲ್, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಲವ್ ಜಿಹಾದ್ ಜತೆಗೆ ಈಗ ಲ್ಯಾಂಡ್ ಜಿಹಾದ್ ಆರಂಭವಾಗಿದೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಇರುವವರೆಗೆ ರಾಜ್ಯ ಉದ್ಧಾರ ಆಗಲ್ಲ. ಹಿಂದುಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಮುಸ್ಲಿಮರ ಓಲೈಕೆಗಾಗಿ ಮಾಡಬಾರದನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ವಕ್ಫ್ ಕಾಯ್ದೆಯ ದುರ್ಬಳಕೆಯಿಂದಾಗಿ ರೈತರು, ಮಠ-ಮಾನ್ಯಗಳು, ಹಿಂದು ದೇವಾಲಯಗಳು ಆತಂಕ ಎದುರಿಸುವಂತಾಗಿದೆ. ಮುಸ್ಲಿಮರ ತುಷ್ಟೀಕರಣಕ್ಕಾಗಿ ಈ ಹಿಂದೆ ಕಾಂಗ್ರೆಸ್‌ನವರೇ ರಚಿಸಿರುವ ಕಾಯ್ದೆ ಇದಾಗಿದೆ. ಸರ್ಕಾರದ ಭಾಗವೇ ಆಗಿರುವ ವಕ್ಫ್ ಬೋರ್ಡ್ ಮೇಲೆ ಸರ್ಕಾರದ ಹಿಡಿತ ಎಷ್ಟರಮಟ್ಟಿಗೆ ಇದೆ ಎನ್ನುವ ಪ್ರಶ್ನೆ ಮೂಡಿಸುತ್ತದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ನರಸಿಂಹರಾಜು, ನಿಕಟಪೂರ್ವ ಅಧ್ಯಕ್ಷ ಮಹೇಶ್ ಬೈ ಮತ್ತು ಶಿವಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಿ.ಆರ್. ವೆಂಕಟೇಶ್, ಮಂಜುನಾಥ್ ಮತ್ತು ವಿನೋದ್, ತಾಪಂ ಮಾಜಿ ಸದಸ್ಯ ರಾಜಣ್ಣ, ದೇವರಾಜ್, ಶಂಕರ್, ಗೋವಿಂದರಾಜು, ವೆಂಕಟಶಿವಪ್ಪ, ಪ್ರಕಾಶ್‌ಗುಪ್ತ, ಜಿಲ್ಲಾ ಪ್ರಮುಖರಾದ ನಾರಾಯಣರೆಡ್ಡಿ, ಮಾಡಿಕೆರೆ ಅರುಣ್, ಮುನಿರಾಜು, ಗಾಜಲು ಶಿವ, ಪ್ರದೀಪ್, ಸದಾಶಿವರೆಡ್ಡಿ, ಚಿನ್ನಸಂದ್ರ, ಮನೋಹರ್, ವಕೀಲ ಮುನಿರಾಜು, ಗಾಂಧಿನಗರ ಸಿಂಗ್, ವೆಂಕಟರವಣ, ಭಾಗ್ಯಮ್ಮ, ಪಂಕಜಾ, ಮಂಗಳ ಗೌರಮ್ಮ ಮತ್ತಿತರರು ಭಾಗವಹಿಸಿದ್ದರು.
ಸಚಿವರಿಂದ ಡಿಸಿಗಳಿಗೆ ಸೂಚನೆ
ಅಲ್ಪಸಂಖ್ಯಾತರ ಹಾಗೂ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ವಕ್ಫ್ ಪ್ರಗತಿ ಪರಿಶೀಲನೆ ಹಾಗೂ ವಕ್ಫ್ ಅದಾಲತ್ ನಡೆಸಿ 1974ರ ಸರ್ಕಾರದ ಗೆಜೆಟ್ ಪ್ರಕಾರ ಕೃಷಿ ಜಮೀನು, ಮಠ-ಮಂದಿರಗಳ ಆಸ್ತಿ ಸೇರಿ ದೊಡ್ಡ ಪ್ರಮಾಣದಲ್ಲಿ ಆಸ್ತಿಗಳನ್ನು ವಕ್ಫ್ ಹೆಸರಿನಲ್ಲಿ ತಕ್ಷಣ ಕಂದಾಯ ದಾಖಲೆಗಳಲ್ಲಿ ಇಂಡೀಕರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ವೇಣುಗೋಪಾಲ್ ದೂರಿದರು.
ರಾಜ್ಯಪಾಲರಿಗೆ ದೂರು
ರಾಜ್ಯದ ಕಾಂಗ್ರೆಸ್ ಸರ್ಕಾರವು ರೈತರ ಸರ್ಕಾರದ, ಮಠ, ಮಂದಿರ ಸ್ವತ್ತುಗಳಲ್ಲಿ ಏಕಾಏಕಿ ಯಾವುದೇ ಮಾಹಿತಿ ನೀಡದೆ ಪಹಣಿ ಕಲಂ 11ರಲ್ಲಿ ವಕ್ಫ್ ಎಂದು ನಮೂದು ಮಾಡಿರುವ ಮತ್ತು ಮಾಡುತ್ತಿರುವುದನ್ನು ತಡೆಯುವ ಮತ್ತು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು ಎಂದು ವೇಣುಗೋಪಾಲ್ ತಿಳಿಸಿದರು.