

ಚಿಕ್ಕಬಳ್ಳಾಪುರ: ಭೂ ಮಂಜೂರಾತಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚಿಸಿದರು.
ನಗರದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಾತನಾಡಿ, ಭೂ ಮಂಜೂರಾತಿ ಪ್ರಕರಣಗಳಲ್ಲಿ ದರಖಾಸ್ತು ಮತ್ತು ಪೋಡಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ, ತಂತ್ರಾಂಶದಲ್ಲಿ ದಾಖಲಿಸಬೇಕು. ದುರಸ್ತಿ ಕೆಲಸದಲ್ಲಿ ನಿಯಮಗಳನ್ನು ಚಾಚೂತಪ್ಪದೇ ಪಾಲಿಸಬೇಕು ಎಂದರು.
ಕಳೆದ ಸಾಲಿನ ನ.25ರಂದು ಸರ್ಕಾರ ಭೂ ಮಂಜೂರಾತಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸುತ್ತೋಲೆ ಹೊರಡಿಸಿದೆ. ಅದರಂತೆ ಸರ್ಕಾರದಿಂದ ಮಂಜೂರಾದ ಜಮೀನು ದರಖಾಸ್ತು ಪೋಡಿಯ ಮಾದರಿಯಲ್ಲಿ ಹೊಸ ಸರ್ವೇ ನಂಬರ್ ನಮೂದಿಸಬೇಕು ಎಂದರು.
ಭೂದಾಖಲೆಗಳ ಸಹಾಯಕ ನಿರ್ದೇಶಕರು ಮತ್ತು ತಹಸೀಲ್ದಾರ್ ಸಮ್ಮುಖದಲ್ಲಿ ಹೊಸ ಸರ್ವೇ ನಂಬರ್ ದಾಖಲಿಸಿ, ಪಹಣಿಯನ್ನು ತಂತ್ರಾಂಶದಲ್ಲಿ ಮುದ್ರಿಸಿರುವ ಕೆಲಸದ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲಾಯಿತು. ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಡಿಡಿಎಲ್‌ಆರ್ ಮಂಜುನಾಥ್ ಥವಣೆ, ತಹಸೀಲ್ದಾರ್ ಅನಿಲ್, ಶಿರಸ್ತೇದಾರ್ ಮಲ್ಲಿಕಾ ಮತ್ತಿತರರು ಇದ್ದರು.