ಎನ್​ಎಸ್​ಡಿ ಕೈತಪ್ಪುವ ಆತಂಕ: ರಾಷ್ಟ್ರೀಯ ನಾಟಕ ಶಾಲೆಗೆ ಕೊಟ್ಟ ಜಾಗ ಅತಿಕ್ರಮಣ, ಕಲಾವಿದರ ಬೇಸರ..

NSD
ಕಲಾಗ್ರಾಮದಲ್ಲಿ ನಿರ್ವಿುಸಲಾಗಿರುವ ಸಾಹಿತಿ ಡಾ.ಯು. ಆರ್. ಅನಂತಮೂರ್ತಿ ಸಮಾಧಿ.
Published on

| ರಮೇಶ ದೊಡ್ಡಪುರ ಬೆಂಗಳೂರು

ರಾಷ್ಟ್ರೀಯ ನಾಟಕ ಶಾಲೆ (ಎನ್​ಎಸ್​ಡಿ) ಬೆಂಗಳೂರು ಘಟಕಕ್ಕೆ ಕೊಟ್ಟ ಭೂಮಿಯನ್ನೇ ರಾಜ್ಯ ಸರ್ಕಾರ ಪದೇಪದೆ ಅತಿಕ್ರಮಣ ಮಾಡುತ್ತಿದ್ದು, ಪ್ರತಿಷ್ಠಿತ ಸಂಸ್ಥೆ ಕರ್ನಾಟಕದಿಂದ ಕೈತಪು್ಪವ ಆತಂಕವನ್ನು ಕಲಾವಿದರು ಹೊರಹಾಕಿದ್ದಾರೆ. ಎನ್​ಎಸ್​ಡಿಗೆ ನೀಡಲಾಗಿರುವ ಜಾಗದಲ್ಲಿ ಕರ್ನಾಟಕ ಸರ್ಕಾರ, ಗಣ್ಯರ ಸಮಾಧಿ ಮಾಡುತ್ತಿದೆ ಎಂಬ ದೂರುಗಳು ದೆಹಲಿಗೆ ಸಲ್ಲಿಕೆಯಾಗಿದೆ ಎನ್ನಲಾಗಿದೆ. ಪ್ರತಿವರ್ಷ ಕರ್ನಾಟಕದ 10 ವಿದ್ಯಾರ್ಥಿಗಳೂ ಸೇರಿ 20 ಜನರಿಗೆ ಕಲಿಸುವ ಸಂಸ್ಥೆಗೆ ಅವಕಾಶ ಕೈತಪ್ಪುವ ಅಪಾಯವಿದೆ.

ಕನ್ನಡಿಗರಿಗೆ ಹೆಚ್ಚಿನ ಅವಕಾಶ: ನವದೆಹಲಿಯಲ್ಲಿರುವ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರ್ನಾಟಕದಲ್ಲಿದ್ದಾರೆ. ಕಲಾಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆಗಳನ್ನು ನೀಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಕೇಂದ್ರವೊಂದನ್ನು ಆರಂಭಿಸಬೇಕು ಎಂಬ ಆಲೋಚನೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದಾಗ, ಕರ್ನಾಟಕ ಮೂಲದ ಎನ್​ಎಸ್​ಡಿ ಹಳೇ ವಿದ್ಯಾರ್ಥಿಗಳು ಹೋರಾಟ ಮಾಡಿ ಮಂಜೂರು ಮಾಡಿಸಿದರು. ಅಂದಿನ ಸರ್ಕಾರ, ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ 35 ಎಕರೆಯಲ್ಲಿ 3.5 ಎಕರೆಯನ್ನು ಎನ್​ಎಸ್​ಡಿಗೆ ಹಸ್ತಾಂತರ ಮಾಡಿತು.

ತರಗತಿಗಳು ನಡೆಯುತ್ತಿರುವ ಕಳೆದ 7 ವರ್ಷದಲ್ಲಿ ಇಲ್ಲಿಯವರೆಗೆ 120 ವಿದ್ಯಾರ್ಥಿಗಳು ಇಲ್ಲಿ ಕಲಿತ್ತಿದ್ದಾರೆ. ಕರ್ನಾಟಕ ಸರ್ಕಾರ ಭೂಮಿ ನೀಡಿರುವುದರಿಂದ, ಶೇ.50 ಅಂದರೆ 10 ಕನ್ನಡಿಗರನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಣದ ಜತೆಗೆ, ಅಲ್ಲಿ ನಿರ್ದೇಶಕರಾಗಿದ್ದ ಸಿ. ಬಸವಲಿಂಗಯ್ಯ ನೇತೃತ್ವದಲ್ಲಿ ರಾಷ್ಟ್ರಕವಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಸುದೀರ್ಘ ರಂಗಪ್ರಯೋಗವನ್ನು ಯಶಸ್ವಿಯಾಗಿ ಪ್ರದರ್ಶಿಸಿ ಲಕ್ಷಕ್ಕೂ ಹೆಚ್ಚು ಜನರನ್ನು ಅಲ್ಲಿನ ವಿದ್ಯಾರ್ಥಿಗಳು ಆಕರ್ಷಿಸಿದ್ದಾರೆ.

7 ರಾಜ್ಯದ ವಿದ್ಯಾರ್ಥಿಗಳು: ಪ್ರತಿವರ್ಷ ದಾಖಲಾಗುವ 20 ವಿದ್ಯಾರ್ಥಿಗಳಲ್ಲಿ 10 ಕನ್ನಡಿಗರಿದ್ದರೆ ಉಳಿದ 10 ವಿದ್ಯಾರ್ಥಿಗಳು 6 ರಾಜ್ಯಗಳಿಂದ ಆಗಮಿಸುತ್ತಾರೆ. ಇಲ್ಲಿ ಕನ್ನಡ ನಾಟಕಗಳನ್ನೇ ಮಾಡುವುದರಿಂದಾಗಿ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಮುಂತಾದ ರಾಜ್ಯಗಳ ವಿದ್ಯಾರ್ಥಿಗಳೂ ಕನ್ನಡ ಕಲಿಯಲೇಬೇಕಾಗುತ್ತದೆ. ಕನ್ನಡದ ಸಾಹಿತಿಗಳ ನಾಟಕಗಳನ್ನೇ ಅಭ್ಯಾಸ ಮಾಡುವುದರಿಂದ ಕನ್ನಡದ ಖ್ಯಾತಿ, ಪ್ರಭಾವ ಎಲ್ಲೆಡೆ ವಿಸ್ತರಿಸುತ್ತದೆ. ಎನ್​ಎಸ್​ಡಿ ಮಹತ್ವ ಏನು ಎಂಬುದನ್ನು ಸರ್ಕಾರ ಅರಿಯಬೇಕು ಎನ್ನುತ್ತಾರೆ ಸಿ. ಬಸವಲಿಂಗಯ್ಯ.

ತೆಲಂಗಾಣ ರಾಜ್ಯದಿಂದಲೂ ಬಹುಬೇಡಿಕೆ

ಬೆಂಗಳೂರಿಗೆ ಎನ್​ಎಸ್​ಡಿ ಕೇಂದ್ರ ನೀಡಿದ ನಂತರ ತೆಲಂಗಾಣ ರಾಜ್ಯ ತನಗೂ ಅಂತಹದ್ದೇ ಕೇಂದ್ರ ಬೇಕು ಎಂದು ಪಟ್ಟು ಹಿಡಿದಿದೆ. ಮೂರು ವರ್ಷಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಅದಕ್ಕೆ ಅಗತ್ಯ ಭೂಮಿ ಹಾಗೂ ಸಹಕಾರ ನೀಡಲು ಸಿದ್ಧ ಎಂದು ತಿಳಿಸಿದೆ. ಕಲಾಗ್ರಾಮದಲ್ಲಿ ಗಣ್ಯರ ಸಮಾಧಿಗಳನ್ನು ನಿರ್ಮಾಣ ಮಾಡುತ್ತಿರುವ ಕುರಿತು ಕೆಲವರು ದೆಹಲಿಯಲ್ಲಿ ಎನ್​ಎಸ್​ಡಿಗೆ ದೂರು ನೀಡಿದ್ದಾರೆ ಎನ್ನಲಾಗಿದ್ದು, ಇಲ್ಲಿನ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಿ. ಬಸವಲಿಂಗಯ್ಯ ನಿವೃತ್ತಿಯಾಗಿ ಮೂರು ತಿಂಗಳು ಕಳೆದರೂ ಪೂರ್ಣಕಾಲಿಕ ನಿರ್ದೇಶಕರನ್ನು ನೇಮಕ ಮಾಡದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇಂತಹ ಕೇಂದ್ರ ಕರ್ನಾಟಕದ ಕೈತಪ್ಪಿದರೆ ಕನ್ನಡಕ್ಕೆ, ಕನ್ನಡಿಗರಿಗೆ ನಷ್ಟ ಎಂದು ರಂಗಕರ್ವಿುಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕೊಟ್ಟಂತೆ ಮಾಡಿದ ಸರ್ಕಾರ

ಎನ್​ಎಸ್​ಡಿ ಕೇಂದ್ರಕ್ಕೆ 3.5 ಎಕರೆ ಪ್ರದೇಶವನ್ನು ರಾಜ್ಯ ಸರ್ಕಾರ ಹಸ್ತಾಂತರಿಸಿದೆ. ಎನ್​ಎಸ್​ಡಿ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ, ಸ್ಥಳದ ಉಪಯೋಗದ ಕುರಿತು ಅವರೇ ನಿರ್ಧಾರ ಮಾಡಬೇಕು. 2013ರಲ್ಲಿ ನಿಧನರಾದ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಅಂತಿಮ ಸಂಸ್ಕಾರವನ್ನು ಎನ್​ಎಸ್​ಡಿಗೆ ಕೊಟ್ಟ ಸ್ಥಳದಲ್ಲಿ ಮಾಡಲಾಯಿತು. 2014ರಲ್ಲಿ ಡಾ. ಯು.ಆರ್. ಅನಂತಮೂರ್ತಿಯವರ ಅಂತಿಮ ಸಂಸ್ಕಾರವನ್ನೂ ಪಕ್ಕದಲ್ಲೇ ನೆರವೇರಿಸಲಾಯಿತು. ಕಲಾಗ್ರಾಮವನ್ನು ಸ್ಮಶಾನ ಮಾಡಬೇಡಿ, ಅಲ್ಲಿ ಕಲೆಗೆ ಅವಕಾಶ ನೀಡಿ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇಬ್ಬರ ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ ಖಾಸಗಿಯವರು ಕಟ್ಟೆಗಳನ್ನು ನಿರ್ವಿುಸಿದ್ದು, ಅದು ಅನಧಿಕೃತ ಎಂದು ಎನ್​ಎಸ್​ಡಿ ನಿರ್ದೇಶಕರಾಗಿ 7 ವರ್ಷ ಕಾರ್ಯನಿರ್ವಹಿಸಿ ಇತ್ತೀಚೆಗಷ್ಟೆ ನಿವೃತ್ತರಾದ ರಂಗಕರ್ವಿು ಡಾ. ಸಿ. ಬಸವಲಿಂಗಯ್ಯ ತಿಳಿಸಿದ್ದಾರೆ. ಈಗಾಗಲೆ ಎನ್​ಎಸ್​ಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ಹಾಗೂ ಉಗ್ರಾಣ ನಿರ್ವಣವಾಗಿದೆ. ಇನ್ನೂ ಒಳಾಂಗಣ ಥಿಯೇಟರ್, ಆಡಳಿತ ಬ್ಲಾಕ್ ಸೇರಿ ಅನೇಕ ನಿರ್ಮಾಣ ಆಗಬೇಕಿದೆ. ಇದೀಗ ಕಳೆದ ತಿಂಗಳು ನಿಧನರಾದ ಕವಿ ಡಾ. ಸಿದ್ಧಲಿಂಗಯ್ಯ ಅಂತಿಮ ಸಂಸ್ಕಾರವನ್ನೂ ಜಿಎಸ್​ಎಸ್ ಅಂತಿಮ ಸಂಸ್ಕಾರ ನಡೆಸಿದ ಸ್ಥಳದ ಪಕ್ಕದಲ್ಲೇ ನಡೆಸಲಾಗಿದೆ.

ಕರ್ನಾಟಕ ಸರ್ಕಾರಕ್ಕೆ ಎನ್​ಎಸ್​ಡಿ ಮಹತ್ವ ತಿಳಿಯುತ್ತಿಲ್ಲ. ಎನ್​ಎಸ್​ಡಿಗೆ ನೀಡಲಾಗಿರುವ ಸ್ಥಳದಲ್ಲಿ ಗಣ್ಯರ ಸಮಾಧಿಗಳನ್ನೇ ನಿರ್ಮಾಣ ಮಾಡಬೇಕು ಎಂಬುದಾದರೆ ಅದನ್ನು ಅಧಿಕೃತಗೊಳಿಸಲಿ. ನಂತರ ಎನ್​ಎಸ್​ಡಿಗೆ ಬೇರೆ ಕಡೆ ಜಾಗ ಕೊಡುವುದು ಒಳ್ಳೆಯದು.| ಡಾ.ಸಿ. ಬಸವಲಿಂಗಯ್ಯ ಎನ್​ಎಸ್​ಡಿ ಬೆಂಗಳೂರು ಮಾಜಿ ನಿರ್ದೇಶಕವಿಶೇಷ ಸಾಧಕರ ಅಂತಿಮ ಸಂಸ್ಕಾರವನ್ನು ಕಲಾಗ್ರಾಮ ದಲ್ಲಿ ನಡೆಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಇಲ್ಲಿನ ಜಾಗಗಳನ್ನು ಮುಂದೆ ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿದೆ.| ಎಸ್. ರಂಗಪ್ಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net