ಬಿಎಸ್‌ಎನ್‌ಎಲ್‌ ಟವರ್‌ಗಳಿಗೆ ನೀಡಲಾಗಿದ್ದ ಜಾಗ ವಾಪಸ್‌-ಡಿಸಿ

DC-Gangubayi-Manka
Published on

ಕಾರವಾರ: ಜಿಲ್ಲೆಯಲ್ಲಿ ಭಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿಗಳಿಗೆ ಖನಿಜ ಪ್ರತಿಷ್ಠಾನದ ಅನುದಾನದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 457 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಕೆಲವು ಬಾರಿ ಅನುದಾನ ವಿಳಂಬವಾಗುವುದರಿಂದ ಅಂಗನವಾಡಿ ನಡೆಸಲು ಸಮಸ್ಯೆ ಉಂಟಾಗುವುದು.

ಮರಳು ಹಾಗೂ ಇತರ ಖನಿಜ ತೆಗೆಯಲು ಪಡೆಯುವ ರಾಜಧನದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಅವಕಾಶವಿದೆ. ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಯೋಜಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಗುಡ್ಡ ಕುಸಿಯಬಹುದಾದ 439 ಸ್ಥಳಗಳನ್ನು ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಅಧ್ಯಯನ ಮಾಡಿ ವರದಿ ನೀಡಿದೆ. ಅಲ್ಲಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿವಿಧ ಇಲಾಖೆಗಳಿಂದ ಕ್ರಿಯಾ ಯೋಜನೆ ತರಿಸಿಕೊಳ್ಳಲಾಗಿದ್ದು, ಒಟ್ಟು 185 ಕೋಟಿ ರೂ.ಗಳ ಯೋಜನೆಯನ್ನು ಸರ್ಕಾರಕ್ಕೆ ಕಳಿಸಿಕೊಡಲಾಗಿದೆ ಎಂದರು.

ಇದನ್ನೂ ಓದಿ:ವಂಚನೆ ಮಾಡುವ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿ
ಜಿಲ್ಲೆಯ ಕರಾವಳಿಯ 12 ಕಡಲ ತೀರಗಳಲ್ಲಿ ಮಳೆಗಾಲ ಪ್ರಾರಂಭವಾದಾಗಿನಿಂದ ಇದುವರೆಗೆ 6 ಜನ ಪ್ರವಾಸಿಗರು ಮೃತಪಟ್ಟಿದ್ದಾರೆ. 42 ಜನರನ್ನು ರಕ್ಷಣೆ ಮಾಡಲಾಗಿದೆ. ಪ್ರವಾಸಿಗರ ರಕ್ಷಣೆಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಜನ ಗೃಹ ಲಕ್ಷ್ಮೀ ಯೋಜನೆಯಲ್ಲಿ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂದು ವಿವರಿಸಿದ್ದರು.
ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ದೂರು ಬಂದಿದೆ. ಅದನ್ನು ತಡೆಯಲು ಕ್ರಮ ವಹಿಸಲಾಗುವುದು. ಮರಳು ಗಣಿಗಾರಿಕೆಗೆ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು ಎಂದರು.

ಟವರ್‌ಗಳಿಗೆ ನೀಡಿದ ಜಮೀನು ವಾಪಸ್
ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣಕ್ಕೆ ಜಿಲ್ಲಾಡಳಿತ ಲೀಸ್ ಮೂಲಕ ನೀಡಿದ 72 ಬೆಟ್ಟದ ಜಾಗಗಳನ್ನು ವಾಪಸ್ ಪಡೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು.
ಜಿಲ್ಲೆಯಲ್ಲಿ ಮೊಬೈಲ್ ನೆಟ್ವರ್ಕ್ ಸಂಪರ್ಕ ಇಲ್ಲದ 196 ಹಳ್ಳಿಗಳನ್ನು ಗುರುತಿಸಲಾಗಿತ್ತು. 18 ಟವರ್‌ಗಳ ಸಾಮರ್ಥ್ಯವನ್ನು 2ಜಿಯಿಂದ 3 ಜಿಗೆ ಹೆಚ್ಚಿಸುವ ಪ್ರಕ್ರಿಯೆ ನಡೆದಿದೆ. ಅಲ್ಲದೆ, ಕಾರವಾರ-8, ಅಂಕೋಲಾ-12, ಜೊಯಿಡಾ-42,ಕುಮಟಾ-19, ಹೊನ್ನಾವರ-8, ಭಟ್ಕಳ-13, ಸಿದ್ದಾಪುರ-17, ಶಿರಸಿ-24, ಮುಂಡಗೋಡ-10, ಸೇರಿ ಒಟ್ಟು 214 ಹೊಸ ಟವರ್ ನಿರ್ಮಾಣಕ್ಕೆ ಬಿಎಸ್‌ಎನ್‌ಎಲ್ ಮುಂದಾಗಿತ್ತು.
ಅದಕ್ಕಾಗಿ ಜಿಲ್ಲಾಡಳಿತ ಅರಣ್ಯ ಹಾಗೂ ಬೆಟ್ಟದ ಜಾಗಗಳನ್ನು 30 ವರ್ಷ ಲೀಸ್‌ಗೆ ನೀಡಿ ಕರಾರು ಪತ್ರ ಸಿದ್ಧ ಮಾಡಿತ್ತು. ಆದರೆ, ಅದರಲ್ಲಿ ಕೆನರಾ ಪ್ರಿವಿಲೇಜ್ ಕಾಯ್ದೆಯಡಿ ಇರುವ 72 ಬೆಟ್ಟದ ಜಾಗಳನ್ನು ಲೀಸ್‌ಗೆ ನೀಡಿದಲ್ಲಿ ತೊಂದರೆ ಉಂಟಾಗಬಹುದು ಎಂದು ಅರಣ್ಯ ಇಲಾಖೆ ಸಲಹೆಯಂತೆ ಅವುಗಳನ್ನು ವಾಪಸ್ ಪಡೆಯಲಾಗುತ್ತಿದೆ.

ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿ ಅನುಮತಿ ಪಡೆದು ಟವರ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net