ಗುಡ್ಡ ಕುಸಿದು ಜೆಸಿಬಿ ಅಪರೇಟರ್ ಸಾವು

Land Fall
Published on

ಗುಡ್ಡ ಕುಸಿದು ಜೆಸಿಬಿ ಅಪರೇಟರ್ ಸಾವು


ಗುರುಪುರ: ಗಂಜಿಮಠ ಸಮೀಪದ ನಾಡಾಜೆ ಎಂಬಲ್ಲಿ ಬುಧವಾರ ಮಧ್ಯಾಹ್ನ ಗುಡ್ಡದ ಮಣ್ಣು ಅಗೆಯುತ್ತಿದ್ದ ಜೆಸಿಬಿ ಮೇಲೆ ಮಣ್ಣು ಕುಸಿದು ಬಿದ್ದು ಜೆಸಿಬಿ ಅಪರೇಟರ್, ಜಾರ್ಖಂಡ್‌ನ ಗಿರಿಧಿ ಸರಿಯಾ ಖುರ್ದ್ ನಿವಾಸಿ ಕೊಸರ್ ಅನ್ಸಾರಿ(22) ಮೃತಪಟ್ಟಿದ್ದಾರೆ.

ಎಡಪದವಿನ ಪ್ರಕಾಶ್ ಗೌಡ ಎಂಬುವರಿಗೆ ಸೇರಿದ ಜೆಸಿಬಿಯಲ್ಲಿ ಮಳಲಿ ನಾಡಾಜೆಯ ಉದಯ ಶೆಟ್ಟಿ ಎಂಬುವರ ಜಾಗದಲ್ಲಿ ರಸ್ತೆ ಬದಿ ಗುಡ್ಡದ ಮಣ್ಣು ಅಗೆದು ಟಿಪ್ಪರ್‌ಗೆ ತುಂಬಿಸುತ್ತಿದ್ದ ವೇಳೆ ಮೇಲ್ಗಡೆಯಿಂದ ಮಣ್ಣು ಕುಸಿದು ಬಿದ್ದಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಜೆಸಿಬಿಯೊಳಗೆ ಸಿಲುಕಿದ್ದ ಅನ್ಸಾರಿಯನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರೂ, ದಾರಿ ಮಧ್ಯೆ ಅಸು ನೀಗಿದ್ದಾನೆ. ಜೆಸಿಬಿ ಪಕ್ಕದಲ್ಲಿದ್ದ ಮಿನಿ ಟಿಪ್ಪರ್ ಸಂಪೂರ್ಣ ಜಖಂಗೊಂಡಿದೆ. ಟಿಪ್ಪರ್‌ನೊಳಗಿದ್ದ ಚಾಲಕ ವಿಕಾಸ್ ಹೊರಗೆ ಹಾರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಜ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಣ್ಣು ಕುಸಿದ ವೇಳೆ ಜೆಸಿಬಿ ಚಾಲಕ ಇಯರ್‌ಫೋನ್ ಸಿಕ್ಕಿಸಿ ಸಂಗೀತ ಆಲಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net