

ಕಲಬುರಗಿ: ರಕ್ತಪಾತದ ಮೂಲಕ ಆಗಾಗ ಸುದ್ದಿಯಾಗುವ ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಇಲ್ಲಿನ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ತಲೆಯನ್ನೇ ಜಜ್ಜಿ ಹಾಕಲಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೌರ (ಕೆ) ಗ್ರಾಮದಲ್ಲಿ ಈ ಕೊಲೆ ನಡೆದಿದೆ.
ಇಲ್ಲಿನ ಶಿರವಾಳ ಗ್ರಾಮದ ಅಕ್ಷಯಕುಮಾರ್ ಕ್ಷತ್ರಿ (28) ಹತ್ಯೆಯಾದ ವ್ಯಕ್ತಿ. ಜಮೀನೊಂದರಲ್ಲಿ ಈ ವ್ಯಕ್ತಿಯನ್ನು ಅಟ್ಟಾಡಿಸಿದ ದುಷ್ಕರ್ಮಿಗಳನ್ನು ತಲವಾರ್ನಿಂದ ಗಂಭೀರವಾಗಿ ಗಾಯಗೊಳಿಸಿದ್ದಲ್ಲದೆ, ತಲೆ ಮೇಲೆ ಕಲ್ಲು ಎತ್ತಿಹಾಕಿದ್ದು, ರುಂಡ ಪೂರ್ಣವಾಗಿ ಜಜ್ಜಿಹೋಗಿದೆ.
ಜಮೀನು ವಿಚಾರವಾಗಿ ಜಗಳ ನಡೆದು ಕೊಲೆಯಲ್ಲಿ ಅಂತ್ಯಗೊಂಡಿದೆ ಎನ್ನಲಾಗಿದೆ. ಮಲ್ಲು ಬಂಡೆ, ಹಣಮಂತ ಬಂಡೆ, ನೀಲಪ್ಪ ಬಂಡೆ, ನೇಮಣ್ಣ ಬಂಡೆ ಎಂಬವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಈ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಫಜಲಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ.