ಮುಡಗೇರಿ ಮಾದರಿಯಲ್ಲಿ ಅಲಗೇರಿಯಲ್ಲೂ ಭೂ ಪರಿಹಾರ-ಸೈಲ್‌ ಭರವಸೆ

DC & MLA held airport-meeting.
Published on

ಕಾರವಾರ: ಅಂಕೋಲಾ ಅಲಗೇರಿ ವಿಮಾನ ನಿಲ್ದಾಣಕ್ಕಾಗಿ ಜಮೀನು ಕಳೆದುಕೊಳ್ಳುವವರಿಗೆ ಕಾರವಾರ ಮುಡಗೇರಿ ಮಾದರಿಯಲ್ಲಿ ಭೂ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಭರವಸೆ ನೀಡಿದ್ದು, ಸಭೆಯಲ್ಲಿದ್ದ ಭೂ ಮಾಲೀಕರು ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಡಿಸಿ ಗಂಗೂಬಾಯಿ ಮಾನಕರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಮಾನ ನಿಲ್ದಾಣಕ್ಕೆ ಭೂಮಿ ಹೋಗಲಿರುವ ಅಲಗೇರಿ, ಬಾವಿಕೇರಿ, ಹಾಗೂ ಬೇಲೆಕೇರಿ ಗ್ರಾಮಗಳ ಭೂ ಮಾಲೀಕರ ಸಭೆಯನ್ನು ಶನಿವಾರ ಕರೆಯಲಾಗಿತ್ತು.

ಭೂ ಮಾಲೀಕರು ಮಾತನಾಡಿ, ಸರ್ಕಾರದ ಮಾರ್ಗಸೂಚಿ ದರದಂತೆ ಜಮೀನಿಗೆ ಪರಿಹಾರ ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಆದರೆ, ಅದಕ್ಕೆ ನಮ್ಮ ಆಕ್ಷೇಪವಿದೆ. ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಹಾಗೂ ಇತರ ಹಲವು ಬೇಡಿಕೆಗಳನ್ನು ಈ ಹಿಂದಿನ ಸಭೆಗಳಲ್ಲಿ ಇಟ್ಟಿದ್ದೆವು. ನಮ್ಮ ಬೇಡಿಕೆಗಳಿಗೆ ಸ್ಪಂದನೆ ದೊರೆಯದೇ ಇದ್ದರೆ ಯಾವುದೇ ಕಾರಣಕ್ಕೂ ನಾವು ಭೂಮಿ ಬಿಟ್ಟುಕೊಡುವುದಿಲ್ಲ ಎಂದರು.

ಶಾಸಕ ಸತೀಶ ಸೈಲ್ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾರ್ಮಿಕ ಸಚಿವರು ಸಭೆ ನಡೆಸಿ ಭೂ ಮಾಲೀಕರಿಗೆ ಹೆಚ್ಚುವರಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಆ ಪ್ರಸ್ತಾವನೆ ಸರ್ಕಾರಕ್ಕೆ ತಲುಪಿಯೇ ಇಲ್ಲ. ಇತ್ತ ಭೂ ಸ್ವಾಧೀನಕ್ಕೆ ಅಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ. ಇದರಿಂದ ರೈತರು ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದರು. ವಿಮಾನ ನಿಲ್ದಾಣ ಯೋಜನಗೆ ವಿಳಂಬವಾಗುವ ಸಾಧ್ಯತೆ ಇರುವುದರಿಂದ ಸಭೆ ಕರೆಯಲಾಗಿದೆ ಎಂದರು.
ಕಾರವಾರ ಮುಡಗೇರಿ ಗ್ರಾಮದಲ್ಲಿ ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ಭೂ ಸ್ವಾಧೀನಕ್ಕೆ ಪರಿಹಾರ ಹಣ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅಲ್ಲಿ ಭೂ ಸ್ವಾಧೀನ ಅಧಿಸೂಚನೆಯಾದ ದಿನಾಂಕದ ಮಾರ್ಗಸೂಚಿ ದರವನ್ನೇ ಪರಿಗಣಿಸಲಾಗಿದೆ. ಆದರೆ, ಭೂಮಿಯನ್ನು ಕಬ್ಜಾ ಪಡೆಯುವವರೆಗಿನ ದಿನಾಂಕದವರೆಗೆ ಪರಿಹಾರಧನಕ್ಕೆ ಬಡ್ಡಿ ನೀಡಲಾಗಿದೆ. ಇದರಿಂದ ಪರಿಹಾರ ಮೊತ್ತ ಹೆಚ್ಚಿದೆ. ಈ ಯೋಜನೆಯಲ್ಲೂ ಅದೇ ಮಾದರಿಯಲ್ಲಿ ಲೆಕ್ಕ ಹಾಕಿದರೆ ತರಿ ಭೂಮಿಗೆ ಪ್ರತಿ ಗುಂಟೆಗೆ ಸುಮಾರು ಎರಡುಕಾಲು ಲಕ್ಷ ರೂ. ಭಾಗಾಯ್ತಕ್ಕೆ ಗುಂಟೆಗೆ ಸುಮಾರು 3 ಲಕ್ಷ ರೂ. ಪರಿಹಾರ ಸಿಗಲಿದೆ ಎಂದು ವಿವರಿಸಿದರು.

ಇದನ್ನೂ ಓದಿ:ರನ್‌ವೇ ನಿರ್ಮಾಣಕ್ಕೆ ಹಣ ನೀಡಿ-ಸಿಎಂಗೆ ದೇಶಪಾಂಡೆ ಪತ್ರ
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾತನಾಡಿ, ಸಾರ್ವಜನಿಕ ಯೋಜನೆಗೆ ಭೂಮಿ ಪಡೆಯುತ್ತಿರುವುದರಿಂದ ಇಲ್ಲಿ ರೈತರ ಒಪ್ಪಿಗೆ ಬೇಕೆಂದಿಲ್ಲ. ರೈತರು ಒಪ್ಪದೇ ಇದ್ದರೆ ಪರಿಹಾರ ಹಣವನ್ನು ನ್ಯಾಯಾಲಯಕ್ಕೆ ಜಮಾ ಮಾಡಿ ಬಲವಂತವಾಗಿ ಭೂಮಿ ಪಡೆಯುವ ಪ್ರಕ್ರಿಯೆ ನಡೆಯಲಿದೆ. ಆದರೆ, ರೈತರಿಗೆ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ನಾವು ಕಾನೂನಿನ ವ್ಯಾಪ್ತಿಯಲ್ಲಿರುವ ಹಲವು ಅವಕಾಶಗಳನ್ನು ಉಪಯೋಗಿಸಿ ಹೆಚ್ಚಿನ ಪರಿಹಾರ ಕೊಡಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂದರು. ಎಡಿಸಿ ರಾಜು ಮೊಗವೀರ, ಕಾರವಾರ ಎಸಿ ಜಯಲಕ್ಷ್ಮೀ ರಾಯಕೋಡ, ಕುಮಟಾ ಎಸಿ ಕಲ್ಯಾಣಿ, ಅಂಕೋಲಾ ತಹಸೀಲ್ದಾರ್ ಅಶೋಕ ಭಟ್ ವೇದಿಕೆಯಲ್ಲಿದ್ದರು.

  • ಪ್ರಮುಖ ಭರವಸೆಗಳು
  • *ಮನೆ ಕಳೆದುಕೊಳ್ಳುವ 72 ಕುಟುಂಬಗಳಿಗೆ ಬೆಳಸೆಯ ಬದಲು ಅಂಕೋಲಾದ ಹೊಸಗದ್ದೆ ಹಾಗೂ ಬೊಗ್ರಿಬೈಲ್‌ನಲ್ಲಿ ನಿವೇಶನ
  • *ಸರೋಜಿನಿ ಮಹಿಷಿ ವರದಿಯಂತೆ ಜಮೀನು ಕಳೆದುಕೊಳ್ಳುವ ಪ್ರತಿ ಕುಟುಂಬಗಳಿಗೆ (ಶೇ. 10 ರಷ್ಟು ಸ್ಥಳೀಯರಿಗೆ) ಉದ್ಯೋಗ ನೀಡಲು ಕ್ರಮ.
  • *ಲೋಕೋಪಯೋಗಿ ಇಲಾಖೆಯಿಂದ ಮನೆ ಹಾಗೂ ಕಟ್ಟಡಗಳ ಮರು ಮೌಲ್ಯಮಾಪನಕ್ಕೆ ಕ್ರಮ.
  • *ಒಂದೇ ಯೋಜನೆಯಾಗಿರುವುದರಿಂದ ಎಲ್ಲ ಮೂರು ಗ್ರಾಮಗಳಿಗೆ ಒಂದೇ ಬೆಲೆ ನಿಗದಿ ಮಾಡಿ ಪರಿಹಾರ ನೀಡುವಂತೆ ಮನವಿ.
  • *ಹೊಸ ಬೆಲೆಯಂತೆ ಹೆಚ್ಚುವರಿ 6.52 ಎಕರೆ ಜಮೀನು ಭೂ ಸ್ವಾಧೀನಕ್ಕೆ ಸರ್ವೇ ಮಾಡಲು ಕ್ರಮ.
  • *ಎರಡನೇ ಬಾರಿ ಜಮೀನು ಕಳೆದುಕೊಳ್ಳುತ್ತಿರುವವರಿಗೆ ಹೆಚ್ಚುವರಿ ಪರಿಹಾರ ನೀಡಲಾಗುವುದು.
  • *40ಮೀ30ಮೀ ನಿವೇಶನ ನೀಡಲು ಸರ್ಕಾರ ಮುಂದಾಗಿದ್ದು, 60 ಮೀ*90ಮೀ ಅಳತೆಯ ನಿವೇಶನ ನೀಡಲು ಪ್ರಯತ್ನ.



ಯೋಜನೆ ಏನು ..?
ಅಂಕೋಲಾದ ಅಲಗೇರಿಯಲ್ಲಿ ನೌಕಾ ಯೋಜನೆಯಡಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಅದಕ್ಕೆ ಹೊಂದಿಕೊಂಡು ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ರಾಜ್ಯ ಸರ್ಕಾರಗಳು ಮುಂದಾಗಿವೆ. ನೌಕಾಸೇನೆ 2 ಕಿಮೀ ಎನ್‌ವೇ ನಿರ್ಮಿಸುತ್ತಿದೆ. ಅದರ ಜತೆ ನಾಗರಿಕ ವಿಮಾನಗಳು ಇಳಿಯಲು ಬೇಕಾಗುವ ಹೆಚ್ಚುವರಿ 1 ಕಿಮೀ ರನ್‌ವೇ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಭೂ ಸ್ವಾಽÃನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು. ಅಂಕೋಲಾದ 3 ಗ್ರಾಮಗಳ 87 ಎಕರೆ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net