ರನ್‌ವೇ ನಿರ್ಮಾಣಕ್ಕೆ ಹಣ ನೀಡಿ-ಸಿಎಂಗೆ ದೇಶಪಾಂಡೆ ಪತ್ರ

R.V.Deshapande
Published on

ಕಾರವಾರ:ಅಂಕೋಲಾದ ಬೇಲೆಕೇರಿ ಸಮೀಪ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರನ್‌ವೇ ನಿರ್ಮಾಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲು ಕ್ರಮ ವಹಿಸಬೇಕು ಎಂದು ಶಾಸಕ ಆರ್.ವಿ.ದೇಶಪಾಂಡೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಸೀಬರ್ಡ್ ನೌಕಾ ಯೋಜನೆಯ ಜತೆಗೆ ನಾಗರಿಕ ವಿಮಾನ ನಿಲ್ದಾಣ ಸ್ಥಾಪಿಸುವ ಪ್ರಕ್ರಿಯೆ ನಡೆದಿದೆ. ಈಗಾಗಲೇ ಭೂ ಸ್ವಾಧೀನಕ್ಕೆ 27 ಕೋಟಿ ರೂ. ಬಿಡುಗಡೆಯಾಗಿದ್ದು, ಇನ್ನು 55 ಕೋಟಿ ರೂ. ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನೌಕಾ ಸೇನೆಯ ವಿಮಾನಗಳ ಕಾರ್ಯಾಚರಣೆಗೆ ಭಾರತ ಸರ್ಕಾರದ ರಕ್ಷಣಾ ಇಲಾಖೆಯಿಂದ ಸುಮಾರು 2 ಸಾವಿರ ಮೀಟರ್ ರನ್‌ವೇ ನಿರ್ಮಾಣ ಮಾಡಲಾಗುತ್ತಿದೆ. ನಾಗರಿಕ ವಿಮಾನ ಎಂದರೆ ಏರ್‌ಬಸ್ 320 ಮುಂತಾದ ವಿಮಾನಗಳು ಇಳಿಯಲು ಹೆಚ್ಚುವರಿ 1000 ಮೀಟರ್ ರನ್‌ವೇ ಅವಶ್ಯಕತೆ ಇದೆ. ಇದರಿಂದ ಹೆಚ್ಚುವರಿ ರನ್‌ವೇ ವೆಚ್ಚವನ್ನು ಭರಿಸುವ ಸಂಬಂಧ ಕರ್ನಾಟಕ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ.

ಶಿವಮೊಗ್ಗ ಸೇರಿ ರಾಜ್ಯದ ಇತರೆಡೆ ರನ್‌ವೇ ವೆಚ್ಚವನ್ನು ಸಂಪೂರ್ಣವಾಗಿ ಕರ್ನಾಟಕ ಸರ್ಕಾರ ಭರಿಸಿದೆ. ಇಲ್ಲಿ ಭಾಗಶಃ ವೆಚ್ಚವನ್ನು ಕರ್ನಾಟಕ ಸರ್ಕಾರ ಭರಿಸಬೇಕಿದೆ ಎಂದು ದೇಶಪಾಂಡೆ ವಿವರಿಸಿದ್ದಾರೆ.
ದಕ್ಷಿಣ ಗೋವಾದ ದಾಂಬೋಲಿಂ ವಿಮಾನ ನಿಲ್ದಾಣ ಸ್ಥಳಾಂತರವಾಗಿದೆ. ಇದರಿಂದ ಅಂಕೋಲಾ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಮಹತ್ವ ಬರಲಿದೆ. ಅಲ್ಲದೆ, ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ಬರಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳು ಸಮಾಲೋಚಿಸಿ ತುರ್ತು ನಿರ್ಧಾರ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net