

ಚಿಂತಾಮಣಿ: ರಸ್ತೆಗಾಗಿ ತೆರವಾಗಲಿರುವ ಮಾವಿನ ಮರಗಳಿಗೆ ಪರಿಹಾರ ನೀಡಿದ ನಂತರವಷ್ಟೇ ಜಮೀನು ವಶಪಡಿಸಿಕೊಳ್ಳುವಂತೆ ಆಗ್ರಹಿಸಿ ಜೆಸಿಬಿಗಳನ್ನು ತಡೆದ ರೈತರು ಕಾಮಗಾರಿಗೆ ಅಡ್ಡಿಪಡಿಸಿದರು.
ತಾಲೂಕಿನ ತಾಲೂಕಿನ ಕೈವಾರ ಹೋಬಳಿ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ ಕೆಐಎಡಿಬಿ ಅಧಿಕಾರಿಗಳು ರಸ್ತೆ ನಿರ್ಮಿಸಲು ಸರ್ವೇ ನಂ.89ರಲ್ಲಿನ ರೈತನ ಜಮೀನಿನಲ್ಲಿ ಮಾವಿನ ಮರಗಳನ್ನು ತೆರವುಗೊಳಿಸಲು ಮುಂದಾದರು. ಈ ಸಂದರ್ಭದಲ್ಲಿ ರೈತರು ಮತ್ತು ಭೂಸ್ವಾಧೀನಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಗ್ರಾಮಾಂತರ ಠಾಣೆ ಪೊಲೀಸರು ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಿದರು.
ನಂತರ ಮಾತುಕತೆ ನಡೆದು ರೈತರ ಮನವೊಲಿಸಿದ ಅಧಿಕಾರಿಗಳು ಎಷ್ಟು ಮರಗಳನ್ನು ತೆರವುಗೊಳಿಸಲಾಗುವುದೋ ಅಷ್ಟಕ್ಕೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ ನಂತರ ರಸ್ತೆ ಮಾಡಲು ರೈತರು ಅನುವು ಮಾಡಿಕೊಟ್ಟರು.
ಅರ್ಜಿ ಸಲ್ಲಿಸಿದರೆ ಪರ‌್ಯಾಯ ಜಮೀನು
ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಸಲುವಾಗಿಯೇ ಬಂದಿದ್ದೇವೆ. ಈಗಾಗಲೇ ಸರ್ವೇ ನಂಬರ್ 87ರ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸರ್ವೇ ನಂ.89ರಲ್ಲಿ ರೈತರು ಪರ್ಯಾಯ ಜಮೀನು ನೀಡುವಂತೆ ಕೋರಿದ್ದಾರೆ. ಅರ್ಜಿ ಸಲ್ಲಿಸಿದರೆ ಬದಲಿ ಜಮೀನು ನೀಡಲಾಗುವುದು. ಕೈಗಾರಿಕಾ ಪ್ರದೇಶದಲ್ಲಿ ಸಮರ್ಪಕ ನೀರಿನ ವ್ಯವಸ್ಥೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಭೂಸ್ವಾಧೀನ ಅಧಿಕಾರಿ ಹರೀಶ್, ಶಿಲ್ಪಾ ತಿಳಿಸಿದರು.
ಕೈಗಾರಿಕಾ ಅಭಿವೃದ್ಧಿ ಅಧಿಕಾರಿ ಆದರ್ಶ, ಎಇಇ ಶ್ವೇತಾ, ಚಿಂತಾಮಣಿ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಶಿವರಾಜ್, ಎಎಸ್‌ಐಗಳಾಧ ಹರೀಶ್, ಪ್ರಕಾಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.