ಭೂ ಸ್ವಾಧೀನಕ್ಕೆ ವಿರೋಧ, ಆತ್ಮಹತ್ಯೆಯ ಎಚ್ಚರಿಕೆ

24KWR6
Published on

ವಿಜಯವಾಣಿ ಸುದ್ದಿಜಾಲ ಅಂಕೋಲಾ: ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಯೇ ಹೊರತು ನಾಗರಿಕ ವಿಮಾನ ನಿಲ್ದಾಣಕ್ಕೆ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಅಲಗೇರಿ ಹಾಗೂ ಬಾವಿಕೇರಿಯ ಕೆಲವು ಗ್ರಾಮಸ್ಥರು ಸಾರ್ವಜನಿಕ ಅಹವಾಲು ಸಭೆಯಲ್ಲಿ ಹೇಳಿ ಹೊರ ನಡೆದ ಘಟನೆ ಸೋಮವಾರ ನಡೆಯಿತು.

ಮಹೇಶ ಗೌಡ, ರಾಯಪ್ಪ ನಾಯಕ, ವಿಶ್ವ ಗೌರೀಶ ನಾಯಕ, ಗೋವಿಂದ ಶೆಟ್ಟಿ, ಮಂಜುನಾಥ ನಾಯಕ, ಗೋವಿಂದ ಆಗೇರ, ಸುರೇಶ ನಾಯಕ ಇತರರು ಮಾತನಾಡಿ, ಯಾವುದೇ ಕಾರಣಕ್ಕೂ ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ಅಂತಹ ಸಂದರ್ಭ ಬಂದರೆ ಆತ್ಮಹತ್ಯೆಗೆ ಶರಣಾಗುತ್ತೇವೆ ಎಂದರು.

ಉದಯ ನಾಯಕ ಮಾತನಾಡಿ, ಈ ಹಿಂದೆ ಒಮ್ಮೆ ನಮ್ಮನ್ನು ನಿರಾಶ್ರಿತರನ್ನಾಗಿ ಮಾಡಲಾಗಿತ್ತು. ಫಲವತ್ತಾದ ಪ್ರತಿ ಎಕರೆ ಜಮೀನಿಗೆ 90 ಸಾವಿರ ನೀಡಿ ಕೈ ತೊಳೆದುಕೊಳ್ಳಲಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ವಿಮಾನ ನಿಲ್ದಾಣ ಯೋಜನೆಯನ್ನು ಸ್ವಾಗತಿಸುವ ಸ್ಥಳೀಯ ಶಾಸಕಿ, ಸಂಸದ ಮತ್ತು ಉಸ್ತುವಾರಿ ಸಚಿವರಿಗೆ ಭೂ ಕಳೆದುಕೊಳ್ಳಲಿರುವ ರೈತರ ಸಂಕಷ್ಟ ಅರ್ಥವಾಗುವುದಿಲ್ಲ. ಇಂತಹ ಸಭೆಗೆ ಅವರೂ ಬಂದರೆ ಇಲ್ಲಿಯ ಜನರ ಪರಿಸ್ಥಿತಿ ತಿಳಿಯುತ್ತಿತ್ತು. ಅವರನ್ನೇ ಕರೆದು ತಂದು ಸಭೆ ಮಾಡಿ ಎಂದು ಗೌರೀಶ ನಾಯ್ಕ ಆಗ್ರಹಿಸಿದರು.

ಭಾರಿ ಆಕ್ಷೇಪ: ವಿಮಾನ ನಿಲ್ದಾಣಕ್ಕಾಗಿ ಬೇಲೆಕೇರಿಯಲ್ಲಿ 20 ಎಕರೆ 35 ಗುಂಟೆ ಜಮೀನು. 25 ಮನೆಗಳು. ಭಾವಿಕೇರಿಯಲ್ಲಿ 3 ಎಕರೆ 12 ಗುಂಟೆ ಜಮೀನು, 6 ಮನೆಗಳು. ಅಲಗೇರಿಯಲ್ಲಿ 69 ಎಕರೆ 12 ಗುಂಟೆ ಜಮೀನು ಮತ್ತು 50 ಮನೆಗಳು ಸ್ವಾಧೀನವಾಗಲಿವೆ. ಪರಿಹಾರಕ್ಕೆ 7.88 ಕೋಟಿ ರೂ. ಮಂಜೂರಾಗಿದೆ. ಪರಿಹಾರ, ಪುನರ್ವಸತಿ ಸಂಬಂಧ ಬೇಲೆಕೇರಿಯಲ್ಲಿ ಸೋಮವಾರ ಸಾರ್ವಜನಿಕ ಅಹವಾಲು ಸಭೆ ನಡೆದಿತ್ತು. ಕೆಲವರು ಆಕ್ಷೇಪಣೆ ಸಲ್ಲಿಸಿದ್ದರು. ಆದರೆ, ಹೆಚ್ಚಿನ ಗಲಾಟೆ ಇಲ್ಲದೇ ಸಭೆ ಮುಕ್ತಾಯವಾಗಿತ್ತು. ಮಂಗಳವಾರ ಬಾವಿಕೇರಿ ಹಾಗೂ ಅಲಗೇರಿ ಗ್ರಾಮಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಭಾರಿ ಆಕ್ಷೇಪ ಕೇಳಿ ಬಂತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಎಚ್.ಕೆ.ಕೃಷ್ಣಮೂರ್ತಿ, ಕುಮಟಾ ಎಸಿ ಅಜಿತ, ತಹಸೀಲ್ದಾರ್ ಉದಯ ಕುಂಬಾರ ಸಮಾಧಾನ ಮಾಡಲು ಯತ್ನಿಸಿದರೂ ಜನ ಅದಕ್ಕೆ ಸೊಪ್ಪು ಹಾಕಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net