ಭೂಸ್ವಾಧಿನ ಮರೆತ ಜಿಲ್ಲಾಡಳಿತ, ನನೆಗುದಿಗೆ ರೈಲ್ವೆ ಯೋಜನೆ!

Land_Param
Published on

ತುಮಕೂರು: ತುಮಕೂರು-ರಾಯದುರ್ಗ ಹಾಗೂ ತುಮಕೂರು-ದಾವಣಗೆರೆ ಮಾರ್ಗದ ರೈಲ್ವೆ ಯೋಜನೆ ಮತ್ತು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗಳಿಗೆ ಭೂಸ್ವಾಧಿನ ಪ್ರಕ್ರಿಯೆ ಕುಂಟುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿದರು.

ತುಮಕೂರು-ರಾಯದುರ್ಗ ಹಾಗೂ ತುಮಕೂರು-ದಾವಣಗೆರೆ ಮಾರ್ಗದ ರೈಲ್ವೆ ಯೋಜನೆ ಮತ್ತು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯು ನಿಧಾನಗತಿಯಲ್ಲಿ ಸಾಗಿದೆ. ಭೂಸ್ವಾಧಿನಕ್ಕೆ ಎಲ್ಲೆಲ್ಲಿ ಸಮಸ್ಯೆಗಳಿವೆ, ಯಾವ ಕಾರಣದಿಂದ ನಿಂತಿವೆ ಎಂಬುದನ್ನು ಸಭೆಯಲ್ಲಿ ಪರಿಶೀಲಿಸಿ ಮಾಹಿತಿ ಪಡೆದಿದ್ದೇನೆ, ತ್ವರಿತವಾಗಿ ಕ್ರಮಕೈಗೊಂಡು ವಿಲೇವಾರಿ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಿದರು.

ಹೇಮಾವತಿ ಯೋಜನೆಗೂ ಇನ್ನು ಸಂಪೂರ್ಣವಾಗಿ ಭೂಸ್ವಾಧಿನ ಆಗಿಲ್ಲ, ಕುಣಿಗಲ್​ ಸೇರಿದಂತೆ ಜಿಲ್ಲೆಯ ನಾಲ್ಕು ಏತ ನೀರಾವರಿ ಯೋಜನೆಗಳ ಭೂಸ್ವಾಧಿನ ಪ್ರಕ್ರಿಯೆ ಸಮಸ್ಯೆಯಾಗುತ್ತಿದೆ. ಅದನ್ನು ಕೂಡ ಪರಿಶೀಲಿಸಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 160 ಎಕರೆ ಭೂಸ್ವಾಧಿನ ಆಗಬೇಕಿದೆ. ಕೆಐಎಡಿಬಿ 12 ಸಾವಿರ ಎಕರೆಗೂ ಹೆಚ್ಚು ಭೂಮಿಯಲ್ಲಿ ಇಂಡಸ್ಟ್ರೀಯಲ್​ ಹಬ್​ ಮಾಡಿದ್ದೇವೆ. 6 ಸ್ಟೇಜ್​ಗಳ ಪೈಕಿ 3 ಸ್ಟೇಜ್​ ಪೂರ್ಣಗೊಂಡಿದೆ ಎಂದರು.

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಲ್ಲಿ ಕೊರಟಗೆರೆ ಭಾಗದಲ್ಲಿ 5000 ಎಕರೆ ನೀರು ಸಂಗ್ರಹಕ್ಕೆ ತೀಮಾರ್ನಿಸಲಾಗಿತ್ತು. ಕೊರಟಗೆರೆ ಭಾಗದ 2500 ಎಕರೆ ಹಾಗೂ ದೊಡ್ಡಬಳ್ಳಾಪುರ 2500 ಎಕರೆ ಅದನ್ನು ಬದಲಾಯಿಸಲಾಗಿದೆ. ಒಂದೇ ಕಡೆ ಮಾಡಲು ನಿರ್ಧರಿಸಿದ್ದಾರೆ. ನಮ್ಮ ಜಿಲ್ಲೆಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಪುನರುಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಕೆ.ವಿ.ಅಶೋಕ್, ಎಡಿಸಿ ಡಾ.ಎನ್.ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net