

ಪಂಕಜ ಕೆ.ಎಂ. ಬೆಂಗಳೂರು
ಎರಡೂವರೆ ಶತಮಾನ ಕಂಡಿರುವ ಸಸ್ಯಕಾಶಿ ‘ಲಾಲ್‌ಬಾಗ್ ಉದ್ಯಾನ’ದಲ್ಲಿ ದೇಶ ವಿದೇಶಗಳ ಮೂರು ಸಾವಿರಕ್ಕೂ ಅಧಿಕ ಸಸ್ಯ ಪ್ರಭೇದಗಳಿದ್ದು, ಅವುಗಳ ಸಮಗ್ರ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯು ‘ಹರ್ಬೇರಿಯಂ ದಾಖಲೀಕರಣ’ ಕಾರ್ಯ ಕೈಗೊಂಡಿದೆ.
ಈಗಾಗಲೇ 9 ಲಕ್ಷ ರೂ. ವೆಚ್ಚದಲ್ಲಿ ಒಂದು ಸಾವಿರ ವಿವಿಧ ಸಸ್ಯ ಪ್ರಭೇದಗಳ ಹರ್ಬೇರಿಯಂ ದಾಖಲೀಕರಣವಾಗಿದ್ದು, ಇನ್ನೊಂದು ವರ್ಷದೊಳಗೆ ಉಳಿದ 2 ಸಾವಿರ ಸಸ್ಯ ಪ್ರಭೇದಗಳ ದಾಖಲೀಕರಣ ಪೂರ್ಣಗೊಳಿಸಲಾಗುವುದು. ಇದಕ್ಕಾಗಿ ಹೆಚ್ಚುವರಿ 10 ಲಕ್ಷ ರೂ. ಅನುದಾನದ ಅಗತ್ಯವಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹರ್ಬೇರಿಯಂ ದಾಖಲಾತಿ: ಸಸ್ಯ ಪ್ರಭೇದಗಳ ವಿವಿಧ ಭಾಗಗಳನ್ನು ಸಂಗ್ರಹಿಸಿ ವೈಜ್ಞಾನಿಕ ರೀತಿಯಲ್ಲಿ ಒಣಗಿಸಿ ಹರ್ಬೇರಿಯಂ ಶೀಟ್‌ನಲ್ಲಿ ಅಂಟಿಸಲಾಗುವುದು. ಇದರಲ್ಲಿ ಒಂದು ಬದಿಯಲ್ಲಿ ಎಲೆ, ಬಳ್ಳಿ, ಬೇರು, ತೊಗಟೆ, ಹೂ, ಕಾಯಿ, ಚಿಗುರು, ಕಾಂಡ, ಕೋಶ, ಬೇರು ಸೇರಿ ಸಸ್ಯದ ಪೂರ್ಣ ಚಿತ್ರಣ ಇರುತ್ತದೆ. ಮತ್ತೊಂದೆಡೆ ಅವುಗಳ ಹೆಸರು,ಮೂಲ, ಉಗಮ ಸ್ಥಾನ, ಯಾವ ಋತುಮಾನದ್ದು, ಹೂ ಹಣ್ಣು ಬಿಡುವ ಕಾಲ, ಎಲೆಗಳು ಚಿಗುರುವ ಹಾಗೂ ಒಣಗುವ ಕಾಲ ಸೇರಿ ಸಮಗ್ರ ಮಾಹಿತಿ ದಾಖಲಿಸಲಾಗುವುದು. ಇದರಿಂದ ಭವಿಷ್ಯದಲ್ಲಿ ಸಸ್ಯಶಾಸ ವರ್ಗೀಕರಣ, ಪರಿಸರ ವಿಜ್ಞಾನ, ಔಷಧೀಯ ಸಸ್ಯಗಳ ಕುರಿತು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹಾಗೂ ಪರಿಸರ ಪ್ರೇಮಿಗಳಿಗೆ ಸಸ್ಯ ಪ್ರಭೇದಗಳ ಸಮಗ್ರ ಮಾಹಿತಿ ಅರಿಯಲು ಹರ್ಬೇರಿಯಂ ದಾಖಲಾತಿ ಸಹಕಾರಿಯಾಗಲಿದೆ.
ರ‌್ಯಾಕ್‌ನಲ್ಲಿ ಸಂಗ್ರಹ: ಹರ್ಬೇರಿಯಂ ದಾಖಲಾತಿ ಕಾರ್ಯ ನಡೆಸಲು ಲಾಲ್‌ಬಾಗ್‌ನಲ್ಲಿ ಪ್ರತ್ಯೇಕ ಘಟಕ ತೆರೆಯಲಾಗಿದೆ. ತಯಾರಿಸಿದ ಹರ್ಬೇರಿಯಂ ಶೀಟ್‌ಗಳನ್ನು ಒಪ್ಪವಾಗಿಡಲು ನಾಲ್ಕು ವಿಶೇಷ ರ‌್ಯಾಕ್‌ಗಳನ್ನು ಅಳವಡಿಸಲಾಗಿದ್ದು, ಈವರೆಗೆ ಸಿದ್ಧಪಡಿಸಿರುವ ಹರ್ಬೇರಿಯಂ ಶೀಟ್‌ಗಳನ್ನು ಕ್ರಮಸಂಖ್ಯೆ ಆಧಾರದಲ್ಲಿ ಜೋಡಿಸಲಾಗಿದೆ. ಒಂದು ಹರ್ಬೇರಿಯಂ ಶೀಟ್ ಸಿದ್ಧಪಡಿಸಲು 15 ರಿಂದ 20 ದಿನ ಬೇಕಾಗುತ್ತದೆ. ಹಿರಿಯ ಸಸ್ಯಶಾಸಜ್ಞ ಡಾ. ಕೇಶವಮೂರ್ತಿ ನೇತೃತ್ವದಲ್ಲಿ ಇಬ್ಬರು ಸಸ್ಯ ವರ್ಗೀಕರಣ ಶಾಸಜ್ಞರನ್ನು ಈ ಕಾರ್ಯದಲ್ಲಿ ತೊಡಗಿದ್ದಾರೆ.
ಲಾಲ್‌ಬಾಗ್‌ನ ಸಸ್ಯ ಸಂಪತ್ತು: ಹರ್ಬೇರಿಯಂ ದಾಖಲೀಕರಣ ಪೂರ್ಣಗೊಂಡ ಬಳಿಕ ಈ ಎಲ್ಲ ಸಸ್ಯ ಪ್ರಭೇದಗಳ ಕುರಿತು ಸಮಗ್ರ ಮಾಹಿತಿ ಒಳಗೊಂಡ ‘ಲಾಲ್‌ಬಾಗ್‌ನ ಸಸ್ಯ ಸಂಪತ್ತು’ (ಪ್ಲಾಂಟ್ಸ್ ವೆಲ್ತ್ ಆ್ ಲಾಲ್‌ಬಾಗ್) ಪುಸ್ತಕವನ್ನು ಹೊರ ತರಲಾಗುವುದು. ಜತೆಗೆ ಲಾಲ್‌ಬಾಗ್‌ನಲ್ಲಿರುವ ಎಲ್ಲ ಸಸ್ಯ ಪ್ರಭೇದಗಳನ್ನು ಬಳ್ಳಿ, ಮರ, ಗಿಡ, ಔಷಧೀಯ ಸಸ್ಯ, ಅಲಂಕಾರಿಕ ಸಸ್ಯಗಳನ್ನು ವರ್ಗೀಕರಿಸಿ ಹಲವು ಸಂಪುಟಗಳ ಪುಸ್ತಕಗಳನ್ನು ಮುದ್ರಿಸಲಾಗುವುದು. ಈ ಕಾರ್ಯ ಪೂರ್ಣಗೊಂಡ ನಂತರ ಈ ಎಲ್ಲ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗುವುದು. ಇದಕ್ಕಾಗಿ ಈಗಾಗಲೇ ಸಸ್ಯಗಳ ಜಿಪಿಎಸ್ ಆಧಾರಿತ ಛಾಯಾಚಿತ್ರಗಳನ್ನು ಸಂಗ್ರಹಿಸಿಡುವ ಕಾರ್ಯವೂ ನಡೆಯುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಕೋಟ್
ಹರ್ಬೇರಿಯಂ ದಾಖಲೀಕರಣ ಒನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳಲಿದ್ದು, ಸಸ್ಯವಿಜ್ಞಾನ ವಿದ್ಯಾರ್ಥಿಗಳಿಗೆ ಹಾಗೂ ಗಿಡ ಮರಗಳ ಬಗ್ಗೆ ಕುತೂಹಲ ಹೊಂದಿರುವವರಿಗೆ, ಜೀವವೈವಿಧ್ಯ ಅಧ್ಯಯನಕಾರರಿಗೆ ಸಸ್ಯ ಪ್ರಭೇದಗಳ ಸಂಪೂರ್ಣ ಮಾಹಿತಿ ತಿಳಿಯಲು ನೆರವಾಗಲಿದೆ.
ಎಂ. ಜಗದೀಶ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ