ಫಲಪುಷ್ಪ ಪ್ರದರ್ಶನಕ್ಕೆ ಆನ್‌ಲೈನ್ ಟಿಕೆಟ್ ವ್ಯವಸ್ಥೆ

LalBagh QR code
Published on

ಬೆಂಗಳೂರು: ಸ್ವಾತಂತ್ರ್ಯೋತ್ಸವ ಅಂಗವಾಗಿ ನಗರದ ಲಾಲ್‌ಬಾಗ್‌ನಲ್ಲಿ ಆರಂಭವಾಗಿರುವ 216ನೇ ಫಲಪುಷ್ಪ ಪ್ರದರ್ಶನದಲ್ಲಿ ಸ್ವಾತಂತ್ರ್ಯ ದಿನ (ಗುರುವಾರ)ದಂದು ಪ್ರದರ್ಶನ ವೀಕ್ಷಣೆಗೆ ಟಿಕೆಟ್ ಪಡೆಯಲು ಅನುಕೂಲವಾಗುವಂತೆ ಕ್ಯೂಆರ್ ಕೋಡ್ ಬಳಸಿ ಆನ್‌ಲೈನ್ ಟಿಕೆಟ್ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಯಂದು ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಈ ವೇಳೆ ಕೌಂಟರ್‌ಗಳಲ್ಲಿ ಟಿಕೆಟ್ ಪಡೆಯುವಾಗ ಉಂಟಾಗುವ ದಟ್ಟಣೆ ತಪ್ಪಿಸಲು ಹಾಗೂ ವೀಕ್ಷಕರು ಸುಲಭವಾಗಿ ಟಿಕೆಟ್ ಪಡೆಯಲು ಅನುಕೂಲವಾಗುವಂತೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಪ್ರದರ್ಶನದ ಎಲ್ಲಾ ದಿನಗಳಲ್ಲೂ ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್‌ಗೆ ವ್ಯವಸ್ಥೆಯಿದೆ. ಆದರೆ ಆಗಸ್ಟ್ 14 ಮತ್ತು 15ರಂದು ಹೆಚ್ಚಿನ ವೀಕ್ಷಕರು ಆಗಮಿಸುವ ನಿರೀಕ್ಷೆಯಿದೆ. ಅಂತಹ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಈ ವ್ಯವಸ್ಥೆ ಅನುಕೂಲವಾಗಲಿದೆ. ಹೀಗಾಗಿ ಲಾಲ್‌ಬಾಗ್‌ಗೆ ಫಲಪುಷ್ಪ ಪ್ರದರ್ಶನಕ್ಕೆ ಬರುವವರು ಆನ್‌ಲೈನ್‌ನಲ್ಲೇ ಟಿಕೆಟ್ ಬುಕ್ ಮಾಡಿಕೊಂಡಲ್ಲಿ, ಮೊಬೈಲ್‌ನಲ್ಲಿ ಅದರ ಸ್ಕ್ರೀನ್ ಶಾರ್ಟ್ ತೋರಿಸಿ ಒಳ ಪ್ರವೇಶಿಸಬಹುದು ಎಂದು ಹೇಳಿದರು.

ಆನ್‌ಲೈನ್ ಟಿಕೆಟ್ ಬುಕಿಂಗ್‌ಗಾಗಿ ಸಂಪರ್ಕಿಸುವ ವೆಬ್‌ಸೈಟ್: https://hasiru.karnataka.gov.in/flowershow/login.aspk. ಆನ್‌ಲೈನ್‌ನಲ್ಲಿ ಬುಕ್ ಮಾಡಿಕೊಂಡು ಬರುವವರಿಗೆ ಅದರ ಸ್ಕ್ರೀನ್ ಶಾರ್ಟ್ ಅನ್ನು ಪರಿಶೀಲಿಸಲು ಪ್ರವೇಶ ದ್ವಾರಗಳಲ್ಲಿ ಪ್ರತ್ಯೇಕ ಕೌಂಟರ್‌ಗಳನ್ನು ಕೂಡ ಮಾಡಲಾಗಿದೆ.

34 ಸಾವಿರ ಮಂದಿ ಭೇಟಿ: ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ 34 ಸಾವಿರ ಅಧಿಕ ವೀಕ್ಷಕರು ಭೇಟಿ ನೀಡಿದ್ದರು. ಇವರಲ್ಲಿ 18,550 ಮಂದಿ ಮಕ್ಕಳಾಗಿದ್ದು, ಉಳಿದಂತೆ 15,680 ಮಂದಿ ಹಿರಿಯರು ಪ್ರದರ್ಶನ ವೀಕ್ಷಿಸಿದ್ದಾರೆ. ಇದರೊಂದಿಗೆ 9 ಲಕ್ಷ ರೂ. ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net