

ಬೆಂಗಳೂರು: ಸ್ವಾತಂತ್ರ್ಯೋತ್ಸವ ಅಂಗವಾಗಿ ‘ಸಸ್ಯಕಾಶಿ’ ಲಾಲ್‌ಬಾಗ್‌ನಲ್ಲಿ ಆಗಸ್ಟ್‌ನಲ್ಲಿ ಆಯೋಜಿಸಲಾಗುವ 216ನೇ ಫಲಪುಷ್ಪ ಪ್ರದರ್ಶನದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಆಂಬೇಡ್ಕರ್ ಜೀವನಗಾಥೆ ಅನಾವರಣಗೊಳ್ಳಲಿದ್ದು, ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ.
ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಸಮಾಜಕ್ಕೊಂದು ಸಂದೇಶ ಸಾರುವ ನಿಟ್ಟಿನಲ್ಲಿ ಪ್ರತಿ ವರ್ಷ ಎರಡು ಬಾರಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತದೆ. ಈ ಬಾರಿ ಅಂಬೇಡ್ಕರ್‌ರನ್ನು ಆಯ್ಕೆ ಮಾಡಲಾಗಿದೆ.
ಸಂವಿಧಾನ ರಚನೆಯ ಕರಡು ಸಮಿತಿ ಅಧ್ಯಕ್ಷರಾಗಿ, ದೇಶದ ಸರ್ವಾಂಗೀಣ ಅಭ್ಯುದಯಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ಶೋಷಿತರ ಹಾಗೂ ಹಿಂದುಳಿದವರ ಕಲ್ಯಾಣಕ್ಕೆ ಸಂವಿಧಾನ ಕಲ್ಪಿಸಿರುವ ಅವಕಾಶ ಮತ್ತು ಮೀಸಲಾತಿಗಳ ಹಿಂದಿನ ರೂವಾರಿ ಡಾ.ಅಂಬೇಡ್ಕರ್. ಈ ನಿಟ್ಟಿನಲ್ಲಿ ‘ಸಂವಿಧಾನ ಶಿಲ್ಪಿ’ಯ ಬಾಲ್ಯ, ಶಿಕ್ಷಣ, ಹೋರಾಟದ ಹಾದಿ, ಕೊಡುಗೆ, ವಿಚಾರಧಾರೆ ಸೇರಿ ಸಂಪೂರ್ಣ ಜೀವನದರ್ಶನವನ್ನು ಫಲಪುಷ್ಪಗಳಲ್ಲಿ ಅನಾವರಣಗೊಳಿಸಲಾಗುತ್ತದೆ.
ಮೊದಲ ಸಭೆ: ಫಲಪುಷ್ಪ ಪ್ರದರ್ಶನ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯ ತಜ್ಞರ ಸಮಿತಿ ಬುಧವಾರ ಮೊದಲ ಸುತ್ತಿನ ಸಭೆ ನಡೆಸಿದ್ದು, ಇದರಲ್ಲಿ 25 ತಜ್ಞರು ಹಾಗೂ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಅಂತಿಮವಾಗಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತಾದ ಪ್ರದರ್ಶನ ಆಯೋಜಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು. ಇನ್ನೂ ಹಲವರು ಸುತ್ತಿನ ಸಭೆ ನಡೆಸಿ ಪ್ರದರ್ಶನದ ಸಂಪೂರ್ಣ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂವಿಧಾನ ಶಿಲ್ಪಿಗೆ ಗೌರವ: ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ‘ಸಂವಿಧಾನದ ಪ್ರಸ್ತಾವನೆ ಓದು’ ಎಂಬ ವಿಶೇಷ ಅಭಿಯಾನದ ಮೂಲಕ ಸಂವಿಧಾನದ ಮಹತ್ವವನ್ನು ಸಾರುವಲ್ಲಿ ಯಶಸ್ವಿಯಾಗಿತ್ತು. ಕೋಟ್ಯಂತರ ಜನರು ಆನ್‌ಲೈನ್ ಮುಖಾಂತರ ಹೆಸರು ನೋಂದಾಯಿಸಿಕೊಂಡು ಏಕಕಾಲದಲ್ಲಿ ಬೃಹತ್ ಸಂಖ್ಯೆಯಲ್ಲಿ ಪ್ರಸ್ತಾವನೆಯನ್ನುವಾಚನ ಮಾಡಿದ್ದರು.