ಶರಣರ ಸಾಧನೆ ‘ಫಲಪುಷ್ಪ’ದಲ್ಲಿ ಅನಾವರಣ

Sudhee_16_RD_Flower_Show_2024_PM_@_Lalbagh (3)
Published on

ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ಕಣ್ಮನ ಸೆಳೆಯುವ ಬಣ್ಣ ಬಣ್ಣದ ಹೂಗಳಿಂದ ಲಾಲ್‌ಬಾಗ್ ಕಂಗೊಳಿಸುತ್ತಿದ್ದು, ವಿಶ್ವಗುರು ಬಸವಣ್ಣ ಅವರಾದಿಯಾಗಿ ವಚನಕಾರರು ಸಮಾಜಕ್ಕೆ ನೀಡಿರುವ ಕೊಡುಗೆ ಹಾಗೂ ವಚನ ಸಾಹಿತ್ಯದ ಹಿರಿಮೆಯನ್ನು ನಾಡಿನ ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ 215ನೇ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗಿದೆ.

ಗುರುವಾರದಿಂದ (ಜ.18 ರಿಂದ ಜ. 28ರವರೆಗೆ) ಹನ್ನೊಂದು ದಿನಗಳ ಕಾಲ ನಡೆಯಲಿರುವ ಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಸಂಜೆ 6 ಗಂಟೆಗೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಚಿವ ರಾಮಲಿಂಗಾರೆಡ್ಡಿ ಸೇರಿ ಸಚಿವರು, ಶಾಸಕರು ಮತ್ತು ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಅಂದಾಜು 2.85 ಕೋಟಿ ರೂ. ವೆಚ್ಚದಲ್ಲಿ ಸುಮಾರು 68 ವಿಧದ 32 ಲಕ್ಷ ಹೂಗಳನ್ನು ಬಳಸಿ ವಚನ ಸಾಹಿತ್ಯಾಧಾರಿತ ಲಪುಷ್ಪ ಪ್ರದರ್ಶನ ಈ ಬಾರಿಯ ವಿಶೇಷತೆಯಾಗಿದೆ. 10-12 ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್.ರಮೇಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅನುಭವ ಮಂಟಪ: ಲಾಲ್‌ಬಾಗ್‌ನ ಗಾಜಿನಮನೆಯ ಕೇಂದ್ರ ಭಾಗದಲ್ಲಿ 34 ಅಡಿ ಅಗಲ ಮತ್ತು 30 ಅಡಿ ಎತ್ತರದ ಅನುಭವ ಮಂಟಪದ ಪುಷ್ಪಮಾದರಿ ಆಕರ್ಷಣೀಯವಾಗಿದೆ. ವಿವಿಧ ವರ್ಣಗಳ 1.5 ಲಕ್ಷ ಗುಲಾಬಿ ಹೂವುಗಳು, 1.55 ಲಕ್ಷ ಹಳದಿ, ಪಿಂಕ್ ಮತ್ತು ಶ್ವೇತವರ್ಣದ ಸೇವಂತಿಗೆ ಹೂವುಗಳು, 1.85 ಲಕ್ಷ ಗುಂಡುರಂಗು (ಗಾಂಫ್ರಿನಾ) ಹೂವುಗಳನ್ನು ಬಳಸಲಾಗಿದೆ. 30 ನುರಿತ ಪುಷ್ಪ ಪರಿಣಿತರ 15 ದಿನಗಳ ಕಾಲ ನಿರಂತರ ಶ್ರಮದಿಂದ ಅನುಭವ ಮಂಟಪ ನಿರ್ಮಾಣಗೊಂಡಿದೆ. ಈ ಮಾದರಿಯ ಎದುರು ಶಿಲ್ಪಿ ವೆಂಕಟಾಚಲಪತಿ ಅವರು ಕೊಡುಗೆ ನೀಡಿರುವ 10 ಅಡಿ ಎತ್ತರದ ವಚನ ರಚನಾನಿರತ ಭಂಗಿಯಲ್ಲಿರುವ ವಿಶ್ವಗುರು ಬಸವಣ್ಣ ಅವರ ಬೃಹತ್ ಪುತ್ಥಳಿ ಅನಾವರಣಗೊಳ್ಳಲಿದೆ. ಇದಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು ಎಂದರು.

ಐಕ್ಯಮಂಟಪ: ಅನುಭವ ಮಂಟಪದ ಹಿಂಬದಿಯಲ್ಲಿ 2,200 ಚದರಡಿ ಪ್ರದೇಶದಲ್ಲಿ ಬಸವಣ್ಣ ಅವರ ಬದುಕಿನ ವಿವಿಧ ಹಂತಗಳನ್ನು ಪ್ರತಿಬಿಂಬಿಸುವ ಐದು ಕಲಾಕೃತಿಗಳು ವಿಶೇಷ ಹೂ-ಗಿಡ ಜೋಡಣೆಯ ನಡುವೆ ಪ್ರದರ್ಶನಗೊಳ್ಳಲಿವೆ. ಇದರ ಕೇಂದ್ರ ಭಾಗದಲ್ಲಿ 10 ಅಡಿ ಅಗಲ ಹಾಗೂ 16 ಅಡಿ ಎತ್ತರದ ಕೂಡಲಸಂಗಮದಲ್ಲಿನ ಬಸವಣ್ಣರ ಐಕ್ಯ ಮಂಟಪದ ಪುಷ್ಪ ಮಾದರಿ ಇರಲಿದ್ದು, 1.5 ಲಕ್ಷ ಗುಲಾಬಿ ಹಾಗೂ 2 ಲಕ್ಷ ಸೇವಂತಿಗೆ ಹೂವುಗಳನ್ನು ಬಳಸಿ ಇದನ್ನು ನಿರ್ಮಿಸಲಾಗುವುದು. 60 ಪ್ರತ್ಯೇಕ ಫಲಕಗಳಲ್ಲಿ ಬಸವಣ್ಣ ಅವರ ಜೀವನ ದರ್ಶನ, ವಚನ ಸಾಹಿತ್ಯ, ನಾನಾ ಶರಣರ ಚಿತ್ರ, ವಚನಗಳನ್ನು ಕಲಾತ್ಮಕವಾಗಿ ಸಂಯೋಜಿಸಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಡಿ.ಎಸ್.ರಮೇಶ್ ತಿಳಿಸಿದರು.

ಶರಣರ ಪ್ರತಿಮೆಗಳು: ಗಾಜಿನಮನೆ ಹಿಂಬದಿಯ ಆವರಣದಲ್ಲಿ ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಕುಂಬಾರ ಗುಂಡಣ್ಣ, ಅಕ್ಕ ನಾಗಲಾಂಬಿಕೆ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಬಾಚಿಕಾಯಕದ ಬಸವಣ್ಣ, ಶರಣೆ ಸತ್ಯಕ್ಕನವರ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ಜತೆಗೆ ಅನುಭವ ಮಂಟಪದ ನಾಲ್ಕು ಮೂಲೆಗಳಲ್ಲೂ ಬರುವಂತೆ ಅಲ್ಲಮಪ್ರಭು, ಸಿದ್ಧರಾಮ ಮತ್ತು ಚೆನ್ನಬಸವಣ್ಣ ಅವರ ಪ್ರತಿಮೆಗಳನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಡಿ.ಎಸ್.ರಮೇಶ್ ಮಾಹಿತಿ ನೀಡಿದರು.

ಇಷ್ಟಲಿಂಗ ಕಲಾಕೃತಿ: ಗಾಜಿನಮನೆಯ ಕೇಂದ್ರಭಾಗದ ಎಡಬದಿಗೆ 1 ಲಕ್ಷ ಗಿಡಗಳಿಂದ ಆಕರ್ಷಕ ವರ್ಟಿಕಲ್ ಗಾರ್ಡನ್ ರೂಪುಗೊಳ್ಳಲಿದ್ದು, ಅದರ ಮೇಲೆ ಬಸವಣ್ಣ ಅವರ ಸೃಷ್ಟಿ 18 ಅಡಿ ಉದ್ದದ, 3 ಅಡಿ ಎತ್ತರ ಹಾಗೂ 12 ಅಡಿ ಅಗಲವಿರುವ ಇಷ್ಟಲಿಂಗ ಪರಿಕಲ್ಪನೆಯ ಕಲಾಕೃತಿ ಪ್ರದರ್ಶನಗೊಳ್ಳಲಿದೆ. 8 ಅಡಿ ಅಗಲ ಮತ್ತು 7 ಅಡಿ ಉದ್ದದ ಪ್ರದೇಶದಲ್ಲಿ ವಚನ ಸಾಹಿತ್ಯಕ್ಕೆ ಪೂರಕವಾದ ವಚನಗಳಿರುವ ಪ್ರಾಚೀನ ಓಲೆಗರಿ ಹಸ್ತಪ್ರತಿಗಳನ್ನು ಮತ್ತು ಅವುಗಳ ಸಂರಕ್ಷಣಾ ವಿಧಾನ ಮತ್ತು ಮಹತ್ವ ಕುರಿತ ವಿಶೇಷ ಪ್ರದರ್ಶನ ಇರಲಿದೆ. ಗಾಜಿನಮನೆಯ ಮೂಲೆಗಳಲ್ಲಿ ಅಕರ್ಷಕ ಪುಷ್ಪ ಪಿರಮಿಡ್‌ಗಳು ಅವುಗಳ ತುದಿಯಲ್ಲಿ ಬಸವಾದಿ ಶರಣದ ಚಿತ್ರ ಸಂಯೋಜನೆ ಇರಲಿದೆ.

ವಚನ ಸಾಹಿತ್ಯ ಪ್ರಸಾರ: ತೋಟಗಾರಿಕೆ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಬಸವಣ್ಣ ಅವರ ವಚನ ಸಾಹಿತ್ಯದ ಕುರಿತು ಸಾಹಿತ್ಯ, ಸಂಗೀತ, ಕಲೆಯ ಮೂಲಕ ಇಡೀ ದಿನ ಪ್ರದರ್ಶಿಸಲು ವಿಶೇಷ ವೇದಿಕೆ ನಿರ್ಮಿಸಲಾಗಿದೆ. ಎಲ್ಇಡಿ ಸ್ಕ್ರೀನ್‌ಗಳ ಮುಖೇನ ಲಾಲ್ಬಾಗ್‌ನ 6 ಆಯ್ದ ಸ್ಥಳಗಳಲ್ಲಿ ಅನಾವರಣಗೊಳ್ಳುವ ಬಸವಣ್ಣರ ತತ್ವದರ್ಶನ, ಬಸವಾದಿ ಶರಣರ ದರ್ಶನ, ವಚನ ಸಾಹಿತ್ಯಕ್ಕೆ ಪೂರಕವಾದ ಮಾಹಿತಿಯನ್ನು ಪ್ರದರ್ಶಿಸಲಾಗುವುದು.

ಪಾರ್ಕಿಂಗ್ ವ್ಯವಸ್ಥೆ: ಉದ್ಯಾನದ ಒಳಗೆ ಪ್ಲ್ಯಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು. ಶಾಂತಿನಗರ ಬಸ್ ನಿಲ್ದಾಣದ ಬಳಿ ಇರುವ ಬಹುಮಹಡಿ ವಾಹನ ನಿಲುಗಡೆ, ಹಾಪ್‌ಕಾಮ್ಸ್ ಆವರಣ ಹಾಗೂ ಜೆ.ಸಿ. ರಸ್ತೆಯಲ್ಲಿನ ಬಿಬಿಎಂಪಿ ಬಹುಮಹಡಿ ವಾಹನ ನಿಲುಗಡೆ ಪ್ರದೇಶಗಳಲ್ಲಿ ಕಾರುಗಳ ನಿಲುಗಡೆಗೆ ಹಾಗೂ ದ್ವಿಚಕ್ರ ವಾಹನಗಳಲ್ಲಿ ಬರುವವರು ಆಲ್ಅಮೀನ್ ಕಾಲೇಜು ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಾಧ್ಯವಾದಷ್ಟು ಸಮೂಹ ಸಾರಿಗೆ ಹಾಗೂ ಮೆಟ್ರೋ ಬಳಸುವಂತೆ ಡಿ.ಎಸ್.ರಮೇಶ್ ಮನವಿ ಮಾಡಿದರು.

ಶಾಲಾ ಮಕ್ಕಳಿಗೆ ಉಚಿತ ಪ್ರವೇಶ: ಸಮವಸ್ತ್ರ ಧರಿಸಿ ಬರುವ ಒಂದರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ (ರಜಾ ದಿನಗಳನ್ನು ಹೊರತುಪಡಿಸಿ) ಉಚಿತ ಪ್ರವೇಶ ನೀಡಲಾಗುವುದು. ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 80 ರೂ. ರಜಾ ದಿನಗಳಲ್ಲಿ 100 ರೂ. 12 ವರ್ಷದೊಳಗಿನ ಮಕ್ಕಳಿಗೆ ಎಲ್ಲ ದಿನಗಳಲ್ಲೂ 30 ರೂ. ಪ್ರವೇಶ ಶುಲ್ಕವಿದೆ. ಪ್ರತಿದಿನ ಬೆಳಗ್ಗೆ 6ರಿಂದ ಸಂಜೆ 7ರವರೆಗೆ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ಸರಕಾರದ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್, ಅಪರ ನಿರ್ದೇಶಕ ಪ್ರಕಾಶ್ ಸೊಬರದ, ಇಲಾಖೆ ಜಂಟಿ ನಿರ್ದೇಶಕ ಡಾ.ಎಂ. ಜಗದೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net