

ತುಮಕೂರು: ರಾಜ್ಯದ ನೂತನ ಸರ್ಕಾರದ ಸಂಪುಟದಲ್ಲಿ ಒಬ್ಬರಾದರೂ ಮಹಿಳಾ ಪ್ರತಿನಿಧಿ ಇರಬೇಕಿತ್ತು. 2ನೇ ಕಂತಿನಲ್ಲಿ ನನಗೆ ಅವಕಾಶ ಸಿಗುವ ವಿಶ್ವಾಸ ಇದೆ ಎಂದು ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಿದ್ದಗಂಗಾ ಮಠಕ್ಕೆ ಸೋಮವಾರ ಸಂಜೆ ಭೇಟಿ ನೀಡಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರಿಗೆ ಮೊದಲ ಕಂತಿನಲ್ಲಿ ಅವಕಾಶ ನೀಡಿದ್ದು ಇನ್ನೂ 25 ರಿಂದ 28 ಸ್ಥಾನ ತುಂಬಬೇಕಿದ್ದು 2ನೇ ಕಂತಿನಲ್ಲಿ ನಮಗೆಲ್ಲರಿಗೂ ಅವಕಾಶ ಸಿಗಲಿದೆ. ನನಗೆ ಯಾವುದೇ ಖಾತೆ ಕೊಟ್ಟರು ನಿರ್ವಹಿಸುತ್ತೇನೆ. ಜವಾಬ್ದಾರಿ ತೆಗೆದುಕೊಂಡು ಉತ್ತಮವಾಗಿ ಕೆಲಸ ಮಾಡಬಲ್ಲೆ. ಸಚಿವ ಸ್ಥಾನಕ್ಕೆ ಯಾವುದೇ ರೀತಿಯ ಲಾಬಿ ಮಾಡುವುದಿಲ್ಲ. ಅದರ ಅವಶ್ಯಕತೆಯು ನನಗಿಲ್ಲ ಎಂದರು.
22 ವರ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದೇನೆ. ಸಾಮಾನ್ಯ ಕಾರ್ಯಕರ್ತೆಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ನಾನು ಯುವ ಕಾಂಗ್ರೆಸ್‌ನಿಂದ ಪಯಣ ಆರಂಭಿಸಿದ್ದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದೀನಿ. ಅಲ್ಲದೆ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದು ಯಶಸ್ವಿಯಾಗಿ ಸಚಿವ ಸ್ಥಾನ ನಿಭಾಯಿಸಬಲ್ಲೆ ಎಂದು ತಿಳಿಸಿದರು.
ಭವಿಷ್ಯ ಉಜ್ವಲಕ್ಕೆ ಪ್ರಾರ್ಥನೆ: ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದು ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಪೂಜ್ಯರ ಅಶಿರ್ವಾದ ಪಡೆದಿದ್ದೇನೆ. ಈ ಸಂದರ್ಭದಲ್ಲಿ ರಾಜ್ಯದ ಭವಿಷ್ಯ ಹಾಗೂ ನನ್ನ ಭವಿಷ್ಯ ಉಜ್ವಲ ಆಗಲಿ. ಜತೆಗೆ ನಮ್ಮ ಸರ್ಕಾರ ಉತ್ತಮವಾಗಿ ಕೆಲಸ ಮಾಡುವಂತೆ ಪ್ರಾರ್ಥನೆ ಮಾಡಿರುವೆ ಎಂದು ಹೆಬ್ಬಾಳಕರ್ ಹೇಳಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆಮಠ್ ಹಾಗೂ ಲಕ್ಷ್ಮೀ ಹೆಬ್ಬಾಳಕರ್ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿದ್ದರು.