ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಸಂಭ್ರಮ

ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಸಂಭ್ರಮ
Published on

ಹುಣಸೂರು: ನಗರದ ಲಕ್ಷ್ಮಣತೀರ್ಥ ನದಿ ದಂಡೆಯಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ 189ನೇ ಲಕ್ಷ್ಮೀನರಸಿಂಹಸ್ವಾಮಿ ದೇವರ ದಿವ್ಯ ರಥಾರೋಹಣೋತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿತು.

ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜೆ, ಹೋಮ, ಹವನ ಕೈಂಕರ್ಯಗಳು ಜರುಗಿತು. ಲಕ್ಷ್ಮೀನರಸಿಂಹ ಸ್ವಾಮಿ ಉತ್ಸವ ಮೂರ್ತಿಯನ್ನು ಭಕ್ತರು ಹೆಗಲ ಮೇಲೆ ಹೊತ್ತು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿದ ಬಳಿಕ 20ಅಡಿ ಎತ್ತರದ ಹಸಿರು ರಥದಲ್ಲಿ ಕೂರಿಸಿ ಅರ್ಚಕ ನಾರಾಯಣಮೂರ್ತಿ ನೇತೃತ್ವದಲ್ಲಿ ರಥದಲ್ಲಿ ಪೂಜೆ ಸಲ್ಲಿಸಲಾಯಿತು.

ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ಉಸ್ತುವಾರಿ ಹೊತ್ತ ತಹಸೀಲ್ದಾರ್ ಮಂಜುನಾಥ್ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರಿಗೆ ಪೂಜೆ ನೆರವೇರಿಸಿದ ಬಳಿಕ ರಥೋತ್ಸವಕ್ಕೆ ಹಸಿರು ನಿಶಾನೆ ತೋರುತ್ತಿದ್ದಂತೆ ಭಕ್ತರು ರಥವನ್ನು ಎಳೆದರು.

ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವಕ್ಕೆ ಕಳೆಕಟ್ಟಲು ನಗರದ ನ್ಯೂ ಮಾರುತಿ ಬಡಾವಣೆ ನಿವಾಸಿ ಉಲ್ಲಾಸ್ ಅವರಿಗೆ ಸೇರಿದ ಅಲಂಕರಿಸಿದ ಜೋಡೆತ್ತು ಸೇರಿದಂತೆ, ಡೊಳ್ಳು ವಾದ್ಯ ತಂಡ, ನಾದಸ್ವರದವರಿಂದ ಕಂಗೊಳಿಸುತ್ತಿತ್ತು. ರಥೋತ್ಸವದಲ್ಲಿ ವಿವಿಧ ಊರುಗಳಿಂದ ಆಗಮಿಸಿದ್ದ ಭಕ್ತರು ರಥ ಎಳೆದರು. ರಥ ಸಾಗುವ ಮಾರ್ಗದುದ್ದಕ್ಕೂ ಮನೆಯ ಮುಂದೆ ರಂಗೋಲಿ ಬಿಡಿಸಿ, ರಸ್ತೆಯ ಎರಡೂ ಬದಿಗೂ ಮಾವು, ಬಾಳೆ ಕಂಬ ಕಟ್ಟಿ ಹಳದಿ ಬಾವುಟಗಳಿಂದ ಅಲಂಕರಿಸಲಾಗಿತ್ತು.

ಸಂಸದ ಯುದವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net