ರೇಷ್ಮೆ, ಹೈನುಗಾರಿಕೆಯಲ್ಲಿ ಲಕ್ಕೋಜನಹಳ್ಳಿ ಮುಂಚೂಣಿ

Kailancha-Ph-001-Gramayana Lakkojanahalli - Story-Photo Veerabadraswamy Templee-Photo -28-4-2024
Published on
  • ಅಂತರ್ಜಲ ಮರುಪೂರಣಕ್ಕೆ ವರದಾನವಾದ ಕೆರೆಗಳು
  • ವೀರಭದ್ರಸ್ವಾಮಿ ಜಾತ್ರೆ ಪ್ರಸಿದ್ಧಿ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ
ಎತ್ತ ನೋಡಿದರೂ ಬೆಟ್ಟ-ಗುಡ್ಡ, ತೆಂಗಿನ ಮರಗಳ ಸಾಲು. ಕಣ್ಣು ಹಾಯಿಸದ ಕಡೆಯಲೆಲ್ಲ ಹಸಿರು ಹೊದ್ದ ಪ್ರಕೃತಿ ಮಡಿಲು. ಈ ಮಧ್ಯೆ ಕೃಷಿಯನ್ನೇ ಪ್ರಧಾನ ಕಸುಬನ್ನಾಗಿ ಅನುಸರಿಸುತ್ತಾ ಗುರುತಿಸಿಕೊಂಡಿರುವ ಗ್ರಾಮ ಲಕ್ಕೋಜನಹಳ್ಳಿ.

ಕೈಲಾಂಚ ಹೋಬಳಿಯ ಲಕ್ಕೋಜನಹಳ್ಳಿ ಗ್ರಾಮ ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಲ್ಲದೇ, ಜಿಲ್ಲೆಯಲ್ಲಿಯೇ ಪ್ರಮುಖ ಗ್ರಾಮವಾಗಿ ಗುರುತಿಸಿಕೊಂಡು ಸರ್ವರ ಸಹಬಾಳ್ವೆಗೆ ಸಾಕ್ಷಿಯಾಗಿದೆ.
ಜಿಲ್ಲಾ ಕೇಂದ್ರ ರಾಮನಗರದಿಂದ 10 ಕಿಮೀ, ಚನ್ನಪಟ್ಟಣದಿಂದ 10 ಕಿಮೀ ಅಂತರದಲ್ಲಿರುವ ಲಕ್ಕೋಜನಹಳ್ಳಿಯಲ್ಲಿ ಸುಮಾರು 1300 ಮಂದಿ ಜನರು ವಾಸಿಸುತ್ತಿದ್ದಾರೆ. ಗ್ರಾಮದಲ್ಲಿ ಹೆಚ್ಚು ರೇಷ್ಮೆ ಬೆಳೆಗಾರರಿದ್ದು, ಪ್ರಮುಖ ಕಸುಬಾಗಿ ಹೈನುಗಾರಿಕೆ ಅವಲಂಬಿಸಿದ್ದಾರೆ. ತೆಂಗು, ಅಡಕೆ, ಮಾವು ಸೇರಿ ತೋಟಗಾರಿಕಾ ಬೆಳೆಗೂ ಗ್ರಾಮ ಹೆಸರುವಾಸಿಯಾಗಿದೆ.

ಮೂಲಸೌಕರ್ಯ

ಮೊದಮೊದಲು ಗರಿಶೆಡ್, ನಾಡ ಹೆಂಚು ಮನೆಗಳು, ಮಣ್ಣಿನ ರಸ್ತೆಗಳಿದ್ದ ಗ್ರಾಮ ಅಭಿವೃದ್ಧಿಯತ್ತ ಸಾಗಿದ್ದು, ಇಂದು ಕಾಂಕ್ರೀಟ್ ಮನೆಗಳು, ಭವ್ಯ ಬಂಗಲೆಗಳು, ಡಾಂಬರು ರಸ್ತೆಗಳು ಎದ್ದು ಕಾಣುತ್ತಿವೆ. ಉತ್ತಮ ರಸ್ತೆ ಸಾರಿಗೆ ಸಂಪರ್ಕ ಗ್ರಾಮಕ್ಕಿದ್ದು ಜಿಲ್ಲೆಯಲ್ಲೇ ಗ್ರಾಮದ ಹೆಸರು ಚಿರಪರಿಚಿತವಾಗಿದೆ.

ಪಾಳೇಗಾರರು ಕಟ್ಟಿಸಿದ ಕೆರೆ

ಗ್ರಾಮದಲ್ಲಿ ಸಂಗಯ್ಯನಕೆರೆ, ಹುಚ್ಚಯ್ಯನಕೆರೆಗಳಿದ್ದು, ಈ ಕೆರೆಗಳನ್ನು ಸಂಗಯ್ಯ ಮತ್ತು ಹುಚ್ಚಯ್ಯ ಎಂಬ ಪಾಳೇಗಾರರು ಅವರ ಆಡಳಿತದ ಅವಧಿಯಲ್ಲಿ ನಿರ್ಮಾಣ ಮಾಡಿದ್ದರು ಎನ್ನಲಾಗಿದೆ. ಈಗಲೂ ಕೆರೆ ಮಧ್ಯದಲ್ಲಿ ಅವರ ಪ್ರತಿಮೆಯುಳ್ಳ ಕಲ್ಲಿನ ಮಂಟಪಗಳಿವೆ. ಇದೇ ಕೆರೆಗಳು ಗ್ರಾಮದ ರೈತರ ಕೊಳವೆಬಾವಿಗಳಿಗೆ ಅಂತರ್ಜಲ ಮರುಪೂರಣಕ್ಕೆ ವರದಾನವಾಗಿದೆ.

ಲಕ್ಕೋಜನಹಳ್ಳಿ ಹೆಸರಿಗೆ ಕಾರಣ

ವಿಶ್ವಕರ್ಮ ಸಮುದಾಯದ ಲಕ್ಕೋಜ ಎಂಬುವರು ಗ್ರಾಮಕ್ಕೆ ಬಂದು ಗ್ರಾಮ ನಿರ್ಮಾಣ ಮಾಡಿದ್ದರಂತೆ. ಈ ಹೆಸರು ಬರುಬರುತ್ತಾ ಲಕ್ಕೋಜನಹಳ್ಳಿಯಾಗಿದೆ. ವಿಶ್ವಕರ್ಮ ಜನಾಂಗದ ಹೆಚ್ಚಿನ ಕುಟುಂಬಗಳಿದ್ದ ಕಾರಣ ಹೆಚ್ಚಾಗಿ ಕೃಷಿ ಜಾಗ ಹೊಂದಿದ್ದರಂತೆ. ಅಲ್ಲದೆ ಕೃಷಿಗೆ ಸಹಾಯಕವಾಗುವ ಕುಡುಗೋಲು, ಹಾರೆ, ಗುದ್ದಲಿ ಮತ್ತಿತರ ಸಲಕರಣೆಗಳನ್ನು ಸುತ್ತಮುತ್ತಲ ಗ್ರಾಮಗಳ ರೈತರಿಗೆ ಮಾಡಿಕೊಡುತ್ತಿದ್ದರಂತೆ. ಈಗಲೂ ಒಂದು ಕುಟುಂಬ ಆ ಕಾಯಕ ಮುಂದುವರಿಸಿದೆ. ಈಗಿನ ಗ್ರಾಮ ನಿರ್ಮಾಣ ಮಾಡಿರುವ ಜಾಗ ಕೂಡ ವಿಶ್ವಕರ್ಮ ಜನಾಂಗದವರು ಹಿಂದೆ ಕೃಷಿ ಕಾಯಕ ಮಾಡುತ್ತಿದ್ದ ಜಾಗ ಎನ್ನಲಾಗಿದ್ದು. ಜತೆಗೆ ಈಗಲೂ ಐದಾರು ವಿಶ್ವಕರ್ಮ ಸಮುದಾಯದ ಕುಟುಂಬಗಳು ಗ್ರಾಮದಲ್ಲಿ ನೆಲೆ ನಿಂತಿವೆ.

ದೇವಾಲಯಗಳು

ವೀರಭದ್ರಸ್ವಾಮಿ, ಬಸವೇಶ್ವರ, ಆದಿಶಕ್ತಿ, ವಾಡೆ ಬಸವೇಶ್ವರ, ಶನೈಶ್ಚರ ಗ್ರಾಮ ದೇವತೆಗಳ ದೇವಾಲಯಗಳಿವೆ. ಹಬ್ಬ, ವಿಶೇಷ ದಿನಗಳಲ್ಲಿ ಪೂಜೆ ಪುನಸ್ಕಾರ, ಉತ್ಸವಗಳು ನಡೆಯುತ್ತವೆ. ವೀರಭದ್ರಸ್ವಾಮಿ ಜಾತ್ರೆ ಪ್ರಸಿದ್ಧವಾಗಿದ್ದು, ಜಿಲ್ಲೆಯಲ್ಲಿಯೇ ಶಿವನಹಳ್ಳಿ ವೀರಭದ್ರಸ್ವಾಮಿ ಜಾತ್ರಾಮಹೋತ್ಸವ ಬಹಳ ಹೆಸರುವಾಸಿಯಾಗಿದೆ. ಅಗ್ನಿಕೊಂಡ, ರಥೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಸಹಸ್ರಾರು ಜನರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದಿಶಕ್ತಿ ದೇವಿ ಗ್ರಾಮದ ಶಕ್ತಿ ದೇವತೆಯಾಗಿದ್ದು, ಪ್ರತಿ ಹಬ್ಬಹರಿದಿನಗಳಲ್ಲಿ ವಿಶೇಷ ಪೂಜೆ, ಕೊಂಡ ಮಹೋತ್ಸವ ನಡೆಯುತ್ತದೆ. ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ,ಡೇರಿ, ನ್ಯಾಯಬೆಲೆ ಅಂಗಡಿ, ಶುದ್ಧ ಕುಡಿಯುವ ನೀರಿನ ಘಟಕ, ಪ್ರಾಥಮಿಕ ಶಾಲೆಗಳಿವೆ.

ರಂಗಮಂದಿರ:

ಲಕ್ಕೋಜನಹಳ್ಳಿ ಪ್ರಾಥಮಿಕ ಶಾಲೆಯ ಮಕ್ಕಳು ಸದಾ ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಯಲ್ಲಿ ಉತ್ಸಾಹದಿಂದ ಇದ್ದು, ಗ್ರಾಮದ ಜನರು, ಯುವಕರು ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಗ್ರಾಮಸ್ಥರೆಲ್ಲರೂ ಸೇರಿ ಶಾಲೆಯ ಮುಂಭಾಗ ಸ್ವಾಮಿ ವಿವೇಕಾನಂದ ಹೆಸರಿನಲ್ಲಿ ಸುಂದರವಾದ ರಂಗಮಂದಿರ ನಿರ್ಮಾಣ ಮಾಡಿ ಶಾಲೆಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಲಕ್ಕೋಜನಹಳ್ಳಿ ಕಲ್ಲು ಬೆಟ್ಟ ಗುಡ್ಡಗಳ ಮಧ್ಯೆ ಇದ್ದರೂ ಸದಾ ಹಸಿರಿನಿಂದ ಕೂಡಿ ಜಿಲ್ಲೆಯಲ್ಲಿಯೇ ಪ್ರಾಮುಖ್ಯತೆ ಪಡೆದ ಗ್ರಾಮವಾಗಿದೆ. ಸಾಮಾಜಿಕ, ಧಾರ್ಮಿಕವಾಗಿ ಗ್ರಾಮ ಗುರುತಿಸಿಕೊಂಡಿದೆ. ರೇಷ್ಮೆ ಕೃಷಿ, ಹೈನುಗಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಗ್ರಾಮದ ಜನರು ಸ್ನೇಹ ಸೌಹಾರ್ಧತೆಯಿಂದ ಬದುಕು ಸಾಗಿಸಲಾಗುತ್ತಿದೆ.
ಕೃಷ್ಣೇಗೌಡ, ಗ್ರಾಮದ ಹಿರಿಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net