ಧೀಮಂತ ನಾಯಕನನ್ನು ಕೊಟ್ಟ ಲಕ್ಕಪ್ಪನಹಳ್ಳಿ

Lakkappanaahalli 1
Published on

* ಕೆಂಗಲ್ ಹನುಮಂತಯ್ಯ ಹುಟ್ಟೂರು ರಾಜ್ಯದಲ್ಲಿಯೇ ಪ್ರಮುಖ ಗ್ರಾಮವಾಗಿ ಖ್ಯಾತಿ

*ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಕ್ಷೇತ್ರಗಳಲ್ಲಿ ಮುಂದಡಿ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಚಿಕ್ಕ ಗ್ರಾಮವಾದರೂ ನಾಡಿಗೆ ಕೆಂಗಲ್ ಹನುಮಂತಯ್ಯ ಎಂಬ ಧೀಮಂತ ನಾಯಕನ ಪರಿಚಯಿಸಿ ನಾಡಿಗೆ ವಿಧಾನಸೌಧ ಎಂಬ ಬಹುದೊಡ್ಡ ಕೊಡುಗೆ ನೀಡಿದ ಮಾಜಿ ಮುಖ್ಯಮಂತ್ರಿ ಕೆಂಗಲ್‌ಹನುಮಂತಯ್ಯ ಅವರ ಹುಟ್ಟೂರೇ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಲಕ್ಕಪ್ಪನಹಳ್ಳಿ.

ಅಂದಿನ ಮೊಗೇಗೌಡನದೊಡ್ಡಿ ಇಂದಿನ ಲಕ್ಕಪ್ಪನಹಳ್ಳಿ ಗ್ರಾಮ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಜನಿಸಿದ ಹುಟ್ಟೂರು.

ಕೃಷಿಕರೇ ಹೆಚ್ಚಿರುವ ಗ್ರಾಮ ಇದಾಗಿದ್ದು, ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನದೆ ಆದ ಛಾಪು ಮೂಡಿಸಿ ಜಿಲ್ಲೆಯಲ್ಲಿ ಅಲ್ಲದೆ ರಾಜ್ಯದಲ್ಲಿಯೇ ಪ್ರಮುಖ ಗ್ರಾಮವಾಗಿ ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಗುರುತಿಸಿಕೊಂಡಿದೆ.

ಸರ್ವ ಜನರ ಸಹಬಾಳ್ವೆಗೆ ಸಾಕ್ಷಿಯಾಗಿರುವ ಗ್ರಾಮ ಇದಾಗಿದ್ದು, ಜಿಲ್ಲಾ ಕೇಂದ್ರದಿಂದ 9 ಕಿಮೀ ಅಂತರದಲ್ಲಿದೆ. ಸುಮಾರು 650 ಜನಸಂಖ್ಯೆ ಇದ್ದು, 450 ಮತದಾರರಿದ್ದಾರೆ. ಒಬ್ಬರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ.

ಈ ಮೊದಮೊದಲು ಗರಿ ಶೆಡ್, ನಾಡ ಹೆಂಚು ಮನೆಗಳು, ಮಣ್ಣಿನ ಬೀದಿ ರಸ್ತೆಗಳಿದ್ದ ಗ್ರಾಮ ಇತ್ತೀಚೆಗೆ ಅಭಿವೃದ್ಧಿಯತ್ತ ಮುನ್ನುಗ್ಗಿ ಇಂದು ಕಾಂಕ್ರೀಟ್ ಮನೆಗಳು, ರಸ್ತೆ, ಡಾಂಬರು ರಸ್ತೆಗಳು ನಿರ್ಮಾಣವಾಗಿವೆ.

ಹೈನುಗಾರಿಕೆಯಲ್ಲಿ ಮುಂದೆ :

ಮಳೆಯಾಶ್ರಿತ ಪ್ರದೇಶ ಹೆಚ್ಚಿರುವ ಕಾರಣ ಜನರು ಜೀವನ ನಿರ್ವಹಣೆಗಾಗಿ ಬೋರ್‌ವೆಲ್ ಮೂಲಕ ಅಗತ್ಯ ನೀರಾವರಿ ಕಲ್ಪಿಸಿಕೊಂಡು ಶೇ. 80 ಜನರು ಹೈನುಗಾರಿಕೆ ಅವಲಂಬಿಸಿದ್ದಾರೆ. ಬೆಂಗಳೂರು ಹಾಲು ಒಕ್ಕೂಟಕ್ಕೆ ಪ್ರತಿದಿನ 800 ಲೀಟರ್ ಹಾಲು ಗ್ರಾಮದಿಂದ ಸರಬರಾಜಾಗುತ್ತಿದೆ.

ಮೈಸೂರು ಮಹಾರಾಜರಿಂದ ದೇಗುಲ ಉದ್ಘಾಟನೆ:

ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಪೂಜೆ ನಡೆಸಿಕೊಂಡು ಬಂದಿದ್ದ ಮಾರಮ್ಮ ದೇವರಿಗೆ ಗ್ರಾಮಸ್ಥರು ನಿರ್ಮಿಸಿದ ದೇಗುವನ್ನು ಮೈಸೂರು ಮಹಾರಾಜ ಶ್ರೀಕಂಠದತ್ತನರಸಿಂಹರಾಜ ಒಡೆಯರ್ ಉದ್ಘಾಟನೆ ನೆರವೇರಿಸಿದ್ದರು ಎನ್ನುತ್ತಾರೆ ಗ್ರಾಮದವರು. ಮಾರಮ್ಮ, ವೀರಭದ್ರಸ್ವಾಮಿ, ಪಾರ್ವತಮ್ಮ, ಹುಚ್ಚಮ್ಮ, ಶನಿಮಹಾತ್ಮ, ಮಹದೇಶ್ವರ ದೇವಾಲಯಗಳಿವೆ. ಐದು ವರ್ಷಗಳಿಗೊಮ್ಮೆ ಮಾರಮ್ಮ ಮತ್ತು ಗ್ರಾಮದೇವತೆಗಳ ಹಬ್ಬ ವಿಜೃಂಭಣೆಯಿಂದ ನೆರವೇರುತ್ತದೆ.

ಪ್ರಥಮ ಶಾಲೆ

ಇಡೀ ಕೈಲಾಂಚ ಹೋಬಳಿಯಲ್ಲಿ ಪ್ರಥಮ ಭಾರಿಗೆ ಲಕ್ಕಪ್ಪನಹಳ್ಳಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಪ್ರಾರಂಭವಾಯಿತು. ಆದರೆ, ಕಳೆದ ಎರಡು ವರ್ಷಗಳಿಂದ ಶಾಲೆಗೆ ಮಕ್ಕಳು ದಾಖಲಾಗದೆ ಸರ್ಕಾರಿ ಶಾಲೆ ಬಾಗಿಲು ಹಾಕುವಂತಾಗಿದೆ.

ಕುಂಠಿತವಾಗಿದ್ದ ಅಭಿವೃದ್ಧಿ

ವಿಶ್ವದಲ್ಲೇ ಹೆಸರಾಗಿರುವ ವಿಧಾನಸೌಧ ನಿರ್ಮಾಣ ಮಾಡಿದ ಕೆಂಗಲ್ ಹನುಮಂತಯ್ಯ ಊರಾದರೂ ಅವರ ಕಾಲದಲ್ಲಿ ಗ್ರಾಮದ ಹೆಸರು ಪ್ರಚಲಿತವಾಯಿತೇ ವಿನಃ ಗ್ರಾಮದ ಅಭಿವೃದ್ಧಿ ಆಗಿರಲಿಲ್ಲ. ನಂತರ ಬಂದ ಸರ್ಕಾರ ಮತ್ತು ಸ್ಥಳೀಯ ಗ್ರಾಪಂ ರಸ್ತೆ, ಚರಂಡಿಗೆ ಅಭಿವೃದ್ಧಿ ಸ್ಪಶರ್ ನೀಡಿದೆ. ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಲ್ಲಿ ರಸ್ತೆ, ಚರಂಡಿ ಗ್ರಂಥಾಲಯ, ಸೋಲಾರ್ ಲೈಟ್ ಮತ್ತಿತರ ಕೆಲಸಗಳು ಆಗಿವೆ. ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಆಗಬೇಕಿದೆ.

ನನಸಾಗದ ಪ್ರತಿಮೆ ನಿರ್ಮಾಣದ ಕನಸು

ಲಕ್ಕಪ್ಪನಹಳ್ಳಿ ಚಿಕ್ಕ ಗ್ರಾಮದಲ್ಲಿ ಜನಿಸಿ ದೇಶದಲ್ಲೇ ತನ್ನ ಹೆಗ್ಗುರುತು ಮೂಡಿಸಿದ ದಕ್ಷ ಆಡಳಿಗಾರ ನಾಡು ಕಂಡ ಧೀಮಂತ ನಾಯಕ ಕೆಂಗಲ್ ಹನುಮಂತಯ್ಯ ಅವರ ಪುತ್ಥಳಿ ಗ್ರಾಮದಲ್ಲಿ ನಿರ್ಮಾಣ ಆಗಬೇಕು ಎಂಬುದು ಅವರ ಅಭಿಮಾನಿಗಳು ಮತ್ತು ಸ್ಥಳೀಯ ಜನರ ಬಯಕೆಯಾಗಿತ್ತು. ಆದರೆ, ಸರ್ಕಾರಗಳು ಪ್ರತಿಮೆ ನಿರ್ಮಾಣ ಮಾಡುವ ಆಶಾ ಭಾವನೆ ಮೂಡಿಸಿದಿವೆಯೇ ವಿನಃ ಪ್ರತಿಮೆ ನಿರ್ಮಾಣದ ಕನಸ್ಸನ್ನು ಇದುವರೆವಿಗೂ ಗ್ರಾಮದಲ್ಲಿ ನನಸಾಗಿಸಲೇ ಇಲ್ಲ. ತಪ್ಪದ ಕಾಡು ಪ್ರಾಣಿಗಳ ಕಾಟ

ಗ್ರಾಮದಲ್ಲಿ ಮೊದಲು ಕುರಿ, ಮೇಕೆ ಹೆಚ್ಚಾಗಿ ಸಾಕಣೆ ಮಾಡಲಾಗುತ್ತಿತ್ತು. ಸಮೀಪದಲ್ಲೇ ಅಚ್ಚಲು ಅರಣ್ಯ ಪ್ರದೇಶ ಮತ್ತು ಅಕ್ಕಪಕ್ಕವೇ ಬೆಟ್ಟಗುಡ್ಡ ಪ್ರದೇಶಗಳಿರುವ ಕಾರಣ ಚಿರತೆ ಉಪಟಳ ಹೆಚ್ಚಿದೆ. ಈ ಕಾರಣದಿಂದ ಗ್ರಾಮದಲ್ಲಿ ಕುರಿ ಮೇಕೆ ಸಾಕಣೆ ಅಪರೂಪವಾಗಿದೆ. ಜತೆಗೆ ಕರಡಿ, ಕಾಡುಹಂದಿಗಳ ಉಪಟಳವಿದೆ. ಹೆಚ್ಚಾಗಿ ಮಾವು ಪ್ರದೇಶವಿದ್ದು ಬಹುಪಾಲು ರೈತರು ಮಾವನ್ನು ವಾಣಿಜ್ಯ ಬೆಳೆಯಾಗಿಸಿಕೊಂಡಿದ್ದಾರೆ. ಜತೆಗೆ ಮಾವು ವ್ಯಾಪಾರದಲ್ಲೂ ಮುಂದಡಿ ಇಟ್ಟಿರುವ ರೈತರು ತೋಟಗಳ ಜತೆಗೆ ಸುತ್ತಮುತ್ತಲ ಗ್ರಾಮಗಳ ರೈತರ ಮಾವಿನ ತೋಟಗಳನ್ನು ಗುತ್ತಿಗೆ ಪಡೆದು ಮಾವು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬೋರ್‌ವೆಲ್ ಅವಲಂಬಿಸಿರುವ ರೈತರು ರೇಷ್ಮೆ ಬೆಳೆ ಅವಲಂಬಿಸಿ ಜೀವನ ಕಟ್ಟಿಕೊಂಡಿದ್ದಾರೆ ಎನ್ನುತ್ತಾರೆ ಲಕ್ಕಪ್ಪನಹಳ್ಳಿ ಲೋಕೇಶ್.

ಗ್ರಾಮ ಇತಿಹಾಸ

ಗ್ರಾಮವನ್ನು ಈ ಹಿಂದೆ ಮೊಗೇಗೌಡನದೊಡ್ಡಿ ಎಂದು ಕರೆಯಲಾಗುತ್ತಿತ್ತು. ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಗ್ರಾಮದ ಹೆಸರನ್ನು ಲಕ್ಕಪ್ಪನಹಳ್ಳಿ ಎಂದು ಬದಲಾಯಿಸಲಾಯಿತು ಎಂದು ಗ್ರಾಮದವರು ಹೇಳುತ್ತಾರೆ.

ಲಕ್ಕಪ್ಪನಹಳ್ಳಿ ಸ್ವಾತಂತ್ರ್ಯ ಪೂರ್ವದಿಂದಲೇ ಪ್ರಚಲಿತದಲ್ಲಿದೆ. ನಾಡಿನ ಇತಿಹಾಸ ಸಾರುವ ವಿಧಾನಸೌಧ ನಿರ್ಮಾತೃ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಹುಟ್ಟೂರು ಎಂಬುದೇ ನಮಗೆ ಹೆಮ್ಮೆಯ ಸಂಗತಿ. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸದಾ ಗ್ರಾಮ ಮುಂದಿದ್ದು, ಸರ್ವರೂ ಯಾವುದೇ ದ್ವೇಷ, ಅಸೂಹೆ ಇಲ್ಲದೆ ಒಗ್ಗಟ್ಟಿನ ಜೀವನಕ್ಕೆ ಸಾಕ್ಷಿಯಾಗಿ ಅಭಿವೃದ್ಧಿಯತ್ತ ಗ್ರಾಮ ಸಾಗಿದೆ. ಇಂತಹ ಗ್ರಾಮದಲ್ಲಿ ಜನ್ಮ ತಾಳಿರುವುದೇ ನಮ್ಮ ಪುಣ್ಯ.ಲಕ್ಕಪ್ಪನಹಳ್ಳಿ ಆರ್. ರವಿಕುಮಾರ್ಗ್ರಾಪಂ ಅಧ್ಯಕ್ಷ ಬನ್ನಿಕುಪ್ಪೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net