ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳರ ಪಾಲು; ಅಧಿಕಾರಿಗಳ ಸಮ್ಮುಖದಲ್ಲೇ ಜೀವಬೆದರಿಕೆ ಹಾಕಿದ ಕಾಳಧನಿಕರು

Gadag Annabhagya
Published on

ಗದಗ: ಬಡವರ ಪಾಲಾಗಬೇಕಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳರ ಪಾಲಾಗುತ್ತಿದೆ. ಗೋದಾಮಿನಲ್ಲಿ ಅಕ್ರಮವಾಗಿ ಅಕ್ಕಿಯನ್ನು ಶೇಖರಿಸಲಾಗಿದೆ ಎಂದು ಖಚಿತ ಮಾಹಿತಿ ಪಡೆದ ಪೊಲೀಸ್​ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಆಹಾರ ಸಾಮಗ್ರಿ ವಶಕ್ಕೆ ಪಡೆದ ಘಟನೆ ಗದಗ ಜಿಲ್ಲೆ ಬೆಟಗೇರಿಯ ನರಸಾಪುರ ಕೈಗಾರಿಕ ಪ್ರದೇಶದಲ್ಲಿ ನಡೆದಿದೆ.

ದಾಳಿ ವೇಳೆ 2 ಲಕ್ಷ 60 ಸಾವಿರ ರೂಪಾಯಿ ಮೌಲ್ಯದ 77 ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಅಕ್ರಮವಾಗಿ ಅಕ್ಕಿ ಶೇಖರಿಸಿರುವ ಕುರಿತು ಮಾಹಿತಿ ನೀಡಿದ್ದಕ್ಕೆ ಕುಪಿತಗೊಂಡ ದಂಧೆಕೋರರು ಅಧಿಕಾರಿಗಳ ಸಮ್ಮುಖದಲ್ಲೇ ಕನ್ನಡ ಪರ ಸಂಘಟನೆಯ ಸದಸ್ಯರಿಗೆ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.

Gadag Annabhagya

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ಎಸ್​. ನೇಮಗೌಡ ಧಮ್ಕಿ ಹಾಕಿರುವ ಏಕನಾಥ್​ ಹಾಗೂ ಗೋದಾಮಿನ ಮಾಲೀಕ ಪರಾರಿಯಾಗಿದ್ದು, ಅವರನ್ನು ಪತ್ತೆ ಹಚ್ಚಲು ವಿಶೇಷ ತಂಡ ಒಂದನ್ನು ರಚಿಸಲಾಗಿದೆ. ಧಂಧೆಕೋರರಿಬ್ಬರು ಮೊಬೈಲ್​ ಫೋನ್​ ಸ್ವಿಚ್​ ಆಫ್​ ಮಾಡಿಕೊಂಡಿದ್ದಾರೆ.

ಶೀಘ್ರದಲ್ಲೇ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುವುದು. ಕನ್ನಡ ಪರ ಸಂಘಟನೆಯ ಸದಸ್ಯರಿಗೆ ಸೂಕ್ತ ಭದ್ರತೆ ನೀಡುವಂತೆ ಸೂಚಿಸಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗದಗ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ಎಸ್​. ನೇಮಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net