

ಬೆಳಗಾವಿ: ನಮ್ಮ ಪಕ್ಷಕ್ಕೆ ಬನ್ನಿ ಎಂದು ಖುದ್ದು ಬಿಜೆಪಿ ನಾಯಕರೇ ಲಖನ್ ಜಾರಕಿಹೊಳಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ. ಗೋಕಾಕ್ನಲ್ಲಿರುವ ಲಖನ್ ಜಾರಕಿಹೊಳಿ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ ಜಗದೀಶ ಶೆಟ್ಟರ್ ಹಾಗೂ ಉಮೇಶ್ ಕತ್ತಿ ಕೆಲಕಾಲ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಖನ್, ಕಾಂಗ್ರೆಸ್ಗೆ ದೆಹಲಿಯಲ್ಲಿ ಮಾತ್ರ ಹೈಕಮಾಂಡ್ ಇಲ್ಲ. ರಾಜ್ಯದಲ್ಲೇ ನಾಲ್ಕು ಜನ ಹೈಕಮಾಂಡ್ ಇದ್ದಾರೆ. ಈಸ್ಟ್-ವೆಸ್ಟ್-ನಾರ್ತ್-ಸೌತ್ ಅಂತ ನಾಲ್ಕು ಹೈಕಮಾಂಡ್ ಇದ್ದಾರೆ ಎಂದು ಜರಿದರು. ರಾಜ್ಯದಲ್ಲಿರುವ ಹೈಕಮಾಂಡ್ನಿಂದಾಗಿ ಸತೀಶ್ ಜಾರಕಿಹೊಳಿ ಚುನಾವಣೆಗೆ ನಿಂತಿದ್ದಾರೆ. ಜಿಲ್ಲೆಯಲ್ಲಿ ಲಿಂಗಾಯತ ಘಟಾನುಘಟಿ ನಾಯಕರಿದ್ದರೂ ಸತೀಶ್ ಜಾರಕಿಹೊಳಿಯನ್ನ ಎಲೆಕ್ಷನ್ಗೆ ನಿಲ್ಲಿಸಲಾಗಿದೆ ಎಂದು ಕಿಡಿಕಾರಿದರು.
ಮೊದಲಿನಂದಲೂ ನಾವು ಮತ್ತು ಸುರೇಶ ಅಂಗಡಿ ಒಂದಾಗಿದ್ವಿ. ಅವರು ಬೇರೆ ಪಕ್ಷದಲ್ಲಿದ್ದರೂ ನಮ್ಮಲ್ಲಿ ಉತ್ತಮ ಸಂಬಂಧವಿತ್ತು. ಮಂಗಳ ಅಂಗಡಿ ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ. ಪಕ್ಷ ಸೇರುವ ಬಗ್ಗೆ ರಮೇಶ್ ಮತ್ತು ಬಾಲಚಂದ್ರ ಜತೆ ಚರ್ಚೆ ಮಾಡಿ ಸೇರುವೆ. ಕಾಂಗ್ರೆಸ್ ಕೇವಲ ಒಬ್ಬರ ಮೇಲೆ ಅವಲಂಬನೆ ಆಗಿದೆ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಲಖನ್ ಹರಿಹಾಯ್ದರು.