ಬಿತ್ತನೆ ಬೀಜ ಪಡೆಯಲು ಬಂದಿದ್ದ ರೈತ ಮಹಿಳೆಯನ್ನು ತಳ್ಳಿ ಬೀಳಿಸಿದ ಲೇಡಿ ಎಸ್​ಐ; ಪೊಲೀಸ್ ದರ್ಪದ ವಿರುದ್ಧ ಸಾರ್ವಜನಿಕರ ಬೇಸರ

1171678
Published on

ಯಾದಗಿರಿ: ಬಿತ್ತನೆ ಬೀಜ ಪಡೆಯಲು ಬಂದಿದ್ದ ರೈತ ಮಹಿಳೆಯೊಬ್ಬರನ್ನು ಲೇಡಿ ಸಬ್​ ಇನ್​​ಸ್ಪೆಕ್ಟರ್​ವೊಬ್ಬರು ಜೋರಾಗಿ ತಳ್ಳಿದ್ದು, ಆಕೆ ಮಾರುದ್ದ ಹೋಗಿ ಬೀಳುವಂತಾಗಿತ್ತು. ಮಹಿಳಾ ಪೊಲೀಸ್​ ಅಧಿಕಾರಿಯ ಈ ವರ್ತನೆಯನ್ನು ದರ್ಪ ಎಂಬುದಾಗಿ ಸಾರ್ವಜನಿಕರು ಖಂಡಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಪಟ್ಟಣದ ರೈತ ಸಂಪರ್ಕ ಕೇಂದ್ರದ ಬಳಿ ಇಂದು ಈ ಘಟನೆ ನಡೆದಿದೆ. ಗುರುಮಠಕಲ್‌ ಠಾಣೆಯ ಪಿಎಸ್ಐ ಗಂಗಮ್ಮ ದರ್ಪ ತೋರಿದ್ದು, ಗುರುಮಠಕಲ್‌ ತಾಲೂಕಿನ ಸಿದ್ದಾಪುರ ಗ್ರಾಮದ‌ ರೈತ ಮಹಿಳೆ ಮಣೆಮ್ಮ ನೆಲಕ್ಕೆ ಬಿದ್ದಿದ್ದರು.

ಶೇಂಗಾ ಬೆಳೆಗಾಗಿ ಹಿಂಗಾರು ಬಿತ್ತನೆಯ ಬೀಜ ಪಡೆಯಲು ಮಣೆಮ್ಮ ಈ ರೈತ ಸಂಪರ್ಕ ಕೇಂದ್ರಕ್ಕೆ ಬಂದಿದ್ದರು. ಬಿತ್ತನೆ ಬೀಜ ಪಡೆಯಲು ಸಾಕಷ್ಟು ಮಂದಿ ಆಗಮಿಸಿದ್ದರಿಂದ ಸರದಿಯಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಣೆಮ್ಮ ಸಾಲಿನಲ್ಲಿ ಬರದೆ ನುಗ್ಗಿದ್ದರಿಂದ ಅಲ್ಲೇ ಬಂದೋಬಸ್ತ್​ಗಿದ್ದ ಪಿಎಸ್​ಐ ಗಂಗಮ್ಮ ಆಕೆಯನ್ನು ನೂಕಿದ್ದಾರೆ. ತಳ್ಳಿದ ತೀವ್ರತೆಗೆ ಮಣೆಮ್ಮ ದೂರ ಹೋಗಿ ಬಿದ್ದಿದ್ದಾರೆ. ಈ ಕುರಿತ ವಿಡಿಯೋ ಹರಿದಾಡುತ್ತಿದ್ದು, ಲೇಡಿ ಸಬ್​ ಇನ್​ಸ್ಪೆಕ್ಟರ್ ದರ್ಪ ತೋರಿದ್ದಾರೆ ಎಂದು ಸಾರ್ವಜನಿಕರಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net