

ಕೆ.ಆರ್.ನಗರ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಲಾಖೆಗೆ ಹೊಸ ರೂಪ ನೀಡುತ್ತಿದ್ದು, ಅಸಂಘಟಿತ ಮತ್ತು ಕಟ್ಟಡ ಕಾರ್ಮಿಕ ಕುಟುಂಬಕ್ಕೆ ಸರ್ಕಾರದ ಸವಲತ್ತು ಸಿಗುವಂತೆ ಮಾಡುವ ಮೂಲಕ ಆರ್ಥಿಕ ಬಲ ತುಂಬುತ್ತಿದ್ದಾರೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ಸಭಾಂಗಣದಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸುರಕ್ಷ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಕ್ಷಮಿಕ ವರ್ಗದ ಸಂಖ್ಯೆ ಹೆಚ್ಚಾಗಿದ್ದು ಅವರನ್ನು ಗುರುತಿಸಿ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು ಎಂಬ ಉದ್ದೇಶ ಇಲಾಖೆಯದ್ದಾಗಿದ್ದು ಪ್ರತಿಯೊಬ್ಬರೂ ಕಡ್ಡಾಯವಾಗಿ ನೋಂದಾಯಿಸಿಕೊಂಡು ಅಗತ್ಯ ಸವಲತ್ತು ಪಡೆಯಬೇಕು ಎಂದು ಕೋರಿದರು.
ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ಸುರಕ್ಷತೆಯಿಂದ ಇರಬೇಕಾಗಿದ್ದು ಕೆಲವು ಸಂದರ್ಭಗಳಲ್ಲಿ ಪ್ರಾಣಹಾನಿ, ಗಾಯ, ಸಾವು ನೋವುಗಳು ಸಂಭವಿಸುತ್ತದೆ. ಇವುಗಳನ್ನು ತಡೆಗಟ್ಟುವ ಉದ್ದೇಶದಿಂದ ಕಾರ್ಮಿಕರು ಸುರಕ್ಷತಾ ಸಾಧನಗಳನ್ನು ಧರಿಸಿ ಕೆಲಸ ಮಾಡಿದರೆ ಅಪಾಯಗಳಿಂದ ಪಾರಾಗಬಹುದು ಎಂದು ಕಿವಿಮಾತು ಹೇಳಿದರು.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ವ್ಯಾಪ್ತಿಯ ಎಲ್ಲ ವರ್ಗದ ಕಾರ್ಮಿಕರನ್ನು ಗುರುತಿಸಿ ನೋಂದಣಿ 1 ತಿಂಗಳ ಅವಧಿಯಲ್ಲಿ ವರದಿ ನೀಡಬೇಕು ಎಂದು ಸ್ಥಳದಲ್ಲಿದ್ದ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್ ಮಾತನಾಡಿ, ರಾಜ್ಯದಲ್ಲಿ ಶೇ.91ರಷ್ಟು ಅಸಂಘಟಿತ ಕಾರ್ಮಿಕರಿದ್ದು ಸಮಾಜದಲ್ಲಿ ಅಂತಹವರನ್ನು ಗುರುತಿಸಿ ಅವರಿಗೆ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ನೀಡಬೇಕಾಗಿರುವುದು ಇಲಾಖೆ ಜವಾಬ್ದಾರಿ ಎಂದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಎಚ್.ಪಿ.ಮಲ್ಲಿಕಾರ್ಜುನ್, ತಾಲೂಕು ಕಾರ್ಮಿಕ ನೀರಿಕ್ಷಕ ಎಚ್.ಕೆ.ಗೋವಿಂದರಾಜ್ ಯಾದವ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ಉದಯಶಂಕರ್, ನಗರಯೋಜನಾ ಪ್ರಾಧಿಕಾರದ ನಿರ್ದೇಶಕ ಸೈಯದ್ ಜಾಬೀರ್, ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ.ರಮೇಶ್, ಕುಂಬಾರ ಸಂಘದ ಮಾಜಿ ಅಧ್ಯಕ್ಷ ತಿಮ್ಮಶೆಟ್ಟಿ, ವೀರಭದ್ರೇಶ್ವರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ಎಚ್.ಕುಮಾರ್ ಇತರರು ಹಾಜರಿದ್ದರು.