ಇಲ್ಲಗಳ ಸಾಮ್ರಾಜ್ಯದಲ್ಲಿ ಕಲ್ಲೇದೇವರಪುರ ಶಾಲೆ

jlr stry
Published on

ಲೋಕೇಶ್ ಎಂ.ಐಹೊಳೆ ಜಗಳೂರು

ಸುಣ್ಣ, ಬಣ್ಣ, ದುರಸ್ತಿ ಕಾಣದೆ ಎಷ್ಟೋ ವರ್ಷಗಳಾಗಿವೆ... ಕಾಂಪೌಂಡ್ ಬದಲು ಬೇಲಿ... ಬಿರುಕು ಬಿಟ್ಟಿರುವ ಕೊಠಡಿಗಳು... ಒಡೆದಿರುವ ಹಂಚುಗಳು, ಕುಳಿತುಕೊಳ್ಳಲು ಡೆಸ್ಕ್ ಇಲ್ಲ, ಶುದ್ಧವಾದ ಕುಡಿಯುವ ನೀರಿಲ್ಲ, ಬಿಸಿಯೂಟ ಕೊಠಡಿಯೂ ಇಲ್ಲ... ಹೀಗೆ ಹಲವಾರು ಸಮಸ್ಯೆಗಳು ಈ ಸರ್ಕಾರಿ ಶಾಲೆಯನ್ನು ಕಾಡುತ್ತಿವೆ.

ತಾಲೂಕಿನ ಕಲ್ಲೇದೇವರಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ, ಉನ್ನತ ಹುದ್ದೆಗೇರಿಸಿದ ಶಾಲೆಯ ಸ್ಥಿತಿ ಮಾತ್ರ ಸಂಪೂರ್ಣ ಅಧೋಗತಿ...

ಇಲ್ಲಿ 1 ರಿಂದ 7 ನೇ ತರಗತಿಯವರೆಗೆ 189 ಮಕ್ಕಳು ಕಲಿಯುತ್ತಿದ್ದು, ಮುಖ್ಯಶಿಕ್ಷಕ ಸೇರಿ 6 ಮಂದಿ ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ತೀವ್ರ ಪೈಪೋಟಿ ನಡುವೆಯೂ ನೂರಾರು ವಿದ್ಯಾರ್ಥಿಗಳ ಹಾಜರಾತಿ ಇದೆ.

ಗಣಿತ, ವಿಜ್ಞಾನ, ಇಂಗ್ಲಿಷ್ ಸೇರಿ ಯಾವ ವಿಷಯದಲ್ಲೂ ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬಿದ್ದಿಲ್ಲ. ನುರಿತ ಶಿಕ್ಷಕರು ಇರುವುದರಿಂದ ಕ್ರೀಡೆ, ಇತರೆ ಕಲಿಕಾ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇಂತಹ ಶಾಲೆಗೆ ಮೂಲಸೌಕರ್ಯ ಒದಗಿಸಿ ಅಭಿವೃದ್ಧಿಪಡಿಸುವುದನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮರೆತಿದ್ದಾರೆ ಎಂಬುದು ಗ್ರಾಮಸ್ಥರ ದೂರು.

ಇದು ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದರೂ ಶಾಲಾಭಿವೃದ್ಧಿಗೆ ಒತ್ತು ಕೊಟ್ಟಿಲ್ಲ. ಈ ಶಾಲೆ ಗೋದಾಮಿನಂತೆ ಭಾಸವಾಗುತ್ತದೆ. ಸುಸಜ್ಜಿತ ಕಟ್ಟಡ, ಕುಳಿತುಕೊಳ್ಳಲು ಡೆಸ್ಕ್, ಆರ್​ಒ ಘಟಕ ನಿರ್ವಿುಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಕಾಂಪೌಂಡ್ ಬದಲು ಬೇಲಿ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಶಾಲೆಯ ಒಂದು ಕಡೆ ಕಾಂಪೌಂಡ್ ಇಲ್ಲ. ಹಾಗಾಗಿ ಶಾಲಾವರಣದ ಗಿಡ, ಮರಗಳಿಗೆ ಹಾನಿಯಾಗುತ್ತಿದೆ. ಕುರಿ ಹಾಗೂ ದನಗಳು ಒಳಗೆ ನುಗ್ಗುತ್ತವೆ. ಆಟವಾಡುವ ಮಕ್ಕಳಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಗ್ರಾಮಸ್ಥರು ಶಾಲೆಯ ಸುತ್ತ ಬೇಲಿ ಹಾಕಿದ್ದಾರೆ.

ಖಾಸಗಿ ಶಾಲೆಗಳತ್ತ ಮುಖ ಮಾಡಿದ ಪಾಲಕರು: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೆ ಹೆಚ್ಚು. ಅದರಲ್ಲೂ ಈ ಶಾಲೆ ಮಕ್ಕಳ ಹಾಜರಾತಿಯಲ್ಲಿ ಹಿಂದೆ ಬಿದ್ದಿಲ್ಲ. ಪ್ರತಿವರ್ಷ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುತ್ತಿದ್ದರು. ಇದೀಗ ಶಾಲಾ ಕೊಠಡಿಗಳ ದುಸ್ಥಿತಿ ಕಂಡ ಪಾಲಕರು ನಿಧಾನವಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.

ಶಾಲೆಯು ಐದಾರು ವರ್ಷಗಳಿಂದ ಶಿಥಿಲಗೊಂಡಿದೆ. ಮಳೆಗಾಲದಲ್ಲಿ ಕೊಠಡಿ ಮೇಲ್ಛಾವಣಿಯಿಂದ ಮಳೆ ನೀರು ಬೀಳುತ್ತದೆ. ಮಕ್ಕಳು ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ, ಗೋಡೆಯ ಸಿಮೆಂಟ್ ಕುಸಿದು ಬೀಳುತ್ತಿದೆ. ಹೊಸ ಕೊಠಡಿ ಅವಶ್ಯಕತೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತರಲಾಗಿದೆ. | ಉಮೇಶ್, ಮುಖ್ಯಶಿಕ್ಷಕ, ಕಲ್ಲೇದೇವರಪುರ. ಸರ್ಕಾರ ವಿವಿಧ ಯೋಜನೆಗಳಿಗೆ ಕೋಟ್ಯಂತರ ರೂ. ಹಣ ವ್ಯಯಮಾಡುವ ಬದಲು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಆದರೆ ಇಚ್ಛಾಶಕ್ತಿಯ ಕೊರತೆಯಿಂದ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಮಟ್ಟಕ್ಕೆ ತಲುಪಿರುವುದು ಖಂಡನಿಯ. | ಸಣ್ಣ ಸೂರಯ್ಯ. ಮಾಜಿ ಅಧ್ಯಕ್ಷರು. ತಾ.ಪಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net