

* ಲಕ್ಕೋಜನಹಳ್ಳಿ, - ಢಣಾಯ್ಕನಪುರ ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ
*ಕಣ್ಣೆದುರೆ ಒಣಗುತ್ತಿರುವ ಪೈರು
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಮಳೆ ಇಲ್ಲದೆ ಬೆಳೆಗಳು ಒಣಗುತ್ತಿದ್ದು, ಮಳೆ ಬರಲಿ, ಫಸಲು ಹಸಿರಾಗಲಿ, ಇಳೆ ತಂಪಾಗಲಿ ಎಂದು ಗ್ರಾಮೀಣ ಜನರು ಮಳೆರಾಯನ ಮೊರೆ ಹೋಗಿದ್ದಾರೆ.
ಹಸಿರಿನಿಂದ ನಳ ನಳಿಸಬೇಕಾದ ರಾಗಿ ಪೈರು ಮಳೆ ಕೊರತೆಯಿಂದ ಒಣಗುತ್ತಿದ್ದು, ರೈತನನ್ನು ಚಿಂತೆಗೀಡು ಮಾಡಿದ್ದು, ಈ ಬೆನ್ನಲ್ಲೇ ತಾಲೂಕಿನ ಲಕ್ಕೋಜನಹಳ್ಳಿ, ಢಣಾಯ್ಕನಪುರ ಸೇರಿ ಹಲವು ಗ್ರಾಮಗಳಲ್ಲಿ ಮಳೆರಾಯನಿಗಾಗಿ ವಿಶೇಷ ಪೂಜೆ ನಡೆಸುತ್ತಿದ್ದಾರೆ.
ಆಗಾಗ ಸುರಿದ ಅಲ್ಪಸ್ವಲ್ಪ ಮಳೆಗೆ ಭೂಮಿ ಹಸನು ಮಾಡಿ ರೈತರು ರಾಗಿ ಬಿತ್ತನೆ ಮಾಡಿದ್ದರು. ಆದರೆ, ಕಾಲ ಕಾಲಕ್ಕೆ ಮಳೆಯಾಗದೆ ರಾಗಿ ಪೈರು ಒಣಗುತ್ತಿದೆ. ಕಣ್ಣೇದುರೇ ಬೆಳೆಗಳು ಹಾಳಾಗುತ್ತಿರುವುದನ್ನು ಕಂಡು ರೈತ ಪ್ರತಿದಿನ ಆಕಾಶದತ್ತ ಮುಖಮಾಡಿದ್ದಾನೆ.
ಮಳೆರಾಯನ ಪ್ರತಿಮೆ ಮೇಲೆ ಹೆಚ್ಚಿನ ನೀರು ಹಾಕಿಸಿ ಗ್ರಾಮದೇವರನ್ನು ಪ್ರಾರ್ಥಿಸಿದರೆ ಹೆಚ್ಚಿನ ಮಳೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಅಂತೆಯೇ, ಮಳೆ ಬಂದ ಸಂದರ್ಭವೂ ಉಂಟು ಎನ್ನುತ್ತಾರೆ ಢಣಾಯ್ಕನಪುರ ಶಿವಲಿಂಗಯ್ಯ.
ಮರದ ಹಲಗೆ ಮೇಲೆ ಮಣ್ಣಿನಿಂದ ಮಳೆರಾಯನ ಮೂರ್ತಿ ಮಾಡಿ ಅದನ್ನು ತಲೆ ಮೇಲೆ ಹೊತ್ತು ಗ್ರಾಮದ ಮನೆ ಮನೆ ಬಳಿ ಹೋಗಿ ಅದರ ಮೇಲೆ ನೀರು ಹಾಕಿಸಿಕೊಂಡು "ಹುಯ್ಯೋ ಹುಯ್ಯೋ ಮಳೆರಾಯ, ಕೆರೆ&ಕುಂಟೆಲ್ಲಿ ನೀರಿಲ್ಲ, ಬಾರೋ ಬಾರೋ ಮಳೆರಾಯ' ಎಂದು ಪ್ರಾರ್ಥಿಸುತ್ತ ಎಲ್ಲರೂ ಹಬ್ಬದ ರೀತಿಯಲ್ಲಿ ಮೆರವಣಿಗೆ ನಡೆಸುತ್ತಾರೆ. ಜತೆಗೆ ಅಕ್ಕಿ, ರಾಗಿ, ಬೆಲ್ಲ, ಸಾಂಬಾರು ಪದಾರ್ಥಗಳನ್ನು ಮನೆಗಳಲ್ಲಿ ಪಡೆದು ನಂತರ ಮೂರ್ತಿಯನ್ನು ಊರ ಓಣಿಯಲ್ಲಿ ಇಟ್ಟು ಬರುತ್ತಾರೆ. ಮತ್ತೆ ಕೆಲವು ಗ್ರಾಮಗಳಲ್ಲಿ ಕೆರೆ ನೀರಿನಲ್ಲಿ ಮುಳುಗಿಸಿ ಬರುತ್ತಾರೆ. ಹೀಗೆ ಮಳೆರಾಯನನ್ನು ಪೂಜಿಸಿದರೆ ಮಳೆ ಬರುತ್ತದೆ ಎನ್ನುವುದು ಹಿರಿಯರ ನಂಬಿಕೆ. ಈ ಹಿನ್ನೆಲೆಯಲ್ಲಿ ವರುಣನ ಕೃಪೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ.
ಈ ಬಾರಿ ಮಳೆರಾಯ ಕೃಪೆ ತೋರಿಲ್ಲ. ರಾಗಿ, ಅವರೆ, ತೊಗರಿ, ಹಲಸಂದೆ ಸೇರಿ ಸಾಲು ಸಾಲು ಬೆಳೆಗಳು ನೆಲಕಚ್ಚಿವೆ. ಉತ್ತಮ ಮಳೆ ಬೀಳಬೇಕಾದ ಸಂದರ್ಭದಲ್ಲಿ ಬೇಸಿಗೆ ವಾತಾವರಣ ಎದುರಾಗಿರುವುದು ರೈತರನ್ನು ಚಿಂತೆಗೀಡುಮಾಡಿದೆ.
ಮಳೆ ಕೊರತೆಯಿಂದ ಜೋಳ, ಸೀಮೆಹುಲ್ಲು ಮತ್ತಿತರ ಹಸಿರು ಮೇವು ನೆಲಕಚ್ಚಿದೆ. ಜಿಲ್ಲೆಯಲ್ಲಿ ಹೈನುಗಾರಿಕೆ ಪ್ರಮುಖವಾಗಿದ್ದು, ಹಸಿರು ಮೇವು ಸಿಗದ ಸನ್ನಿವೇಶ ಸೃಷ್ಟಿಯಾಗಿದೆ.
ನಾವು ಚಿಕ್ಕವರಿದ್ದಾಗ ಮಳೆ ಬಾರದ ಸಂದರ್ಭದಲ್ಲಿ ಹಿರಿಯರು ಮಳೆರಾಯನನ್ನು ಪೂಜಿಸುತ್ತಿದ್ದರು. ಪ್ರಸ್ತುತ ಮಳೆ ಇಲ್ಲದೆ ಬಿತ್ತನೆ ಮಾಡಿದ ರಾಗಿ ಮತ್ತಿತರ ಬೆಳೆಗಳು ಒಣಗುತ್ತಿರುವ ಕಾರಣ ಗ್ರಾಮದಲ್ಲಿ ಮಳೆರಾಯನ ಪೂಜೆ ನಡೆಸಿ ಕೃಪೆಗಾಗಿ ಪ್ರಾರ್ಥಿಸಲಾಗಿದೆ. ಪೂಜೆ ನಡೆಸಿ ಪರ ಮಾಡಿದ್ದು, ಮಳೆ ಬಂದು ಇಳೆ ತಂಪಾಗಿಸುತ್ತದೆ ಎಂಬ ನಂಬಿಕೆ ಇದೆ. > ಶಿವಲಿಂಗಯ್ಯರೈತ ಮುಖಂಡ, ಢಣಾಯ್ಕನಪುರ
ಜಿಲ್ಲೆಯಲ್ಲಿ ಆಗಸ್ಟ್ ವೇಳೆಗೆ ರಾಗಿ ಬಿತ್ತನೆ ಕಾರ್ಯ ಮುಗಿದಿದೆ. ಸೆಪ್ಟೆಂಬರ್ನಲ್ಲಿ ಪೈರು ಬೆಳವಣಿಗೆ ಕಂಡು ಕಾಂಡದ ಬೆಳವಣಿಗೆ ಈ ತಿಂಗಳಲ್ಲಿ ಮಳೆ ಪ್ರಮುಖವಾಗಿರುತ್ತದೆ. ಆದರೆ ಮಳೆ ಕೊರತೆಯಿಂದ ಪೈರು ಬಾಡಿದೆ. ಸೆ.1ರಿಂದ ಇಲ್ಲಿಯವರೆಗೆ 131.5 ಮಿಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ, 25.5 ಮಿಮೀ ಮಳೆಯಾಗಿದ್ದು, 81 ಮಿಮೀ ಮಳೆ ಕೊರತೆಯಾಗಿದೆ.