

ಬಾಗಲಕೋಟೆ: ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ತಂದು ಕೊಡುವುದರ ಜೊತೆಗೆ ಮುಂದಿನ ಬೆಳೆಗೆ ಭೂಮಿ ಫಲವತ್ತತೆ ಹೆಚ್ಚಿಸುತ್ತಿದ್ದ ಚಂಡು ಹೂವಿಗೆ ಬರದ ಬರೆ ಬಿದ್ದಿದೆ. ಮಳೆ ಅಭಾವದಿಂದಾಗಿ ಪ್ರಸಕ್ತ ಹಂಗಾಮಿನಲ್ಲಿ ಚಂಡು ಹೂವಿನ ಇಳುವರಿ ಶೇ. ೪೦ ರಿಂದ ೫೦ ರಷ್ಟು ಕುಸಿತ ಕಂಡಿದ್ದು, ಲಾಭದ ನಿರೀಕ್ಷೆಯಲ್ಲಿ ಇದ್ದ ಹೂವು ಬೆಳೆಗಾರರಿಗೆ ಆಘಾತ ಉಂಟು ಮಾಡಿದೆ.
ಮಳೆಯ ಅಭಾವದ ಜೊತೆಗೆ ವಾತಾವರಣದ ಬದಲಾವಣೆಯಿಂದಾಗಿ ರೋಗಬಾಧೆಯೂ ಆವರಿಸಿದ್ದರಿಂದ ಬೆಳೆಗಾರರಿಗೆ ಗಾಯದ ಮೇಲೆ ಬರೆ ಬಿದ್ದಿದೆ. ಉತ್ತಮ ಮಳೆಯಾದಾಗ ಎಕರೆಗೆ ಕನಿಷ್ಠ ೫ ಟನ್ ನಿಂದ ಗರಿಷ್ಠ ೧೫ ಟನ್ ವರೆಗೂ ಚಂಡು ಹೂವಿನ ಇಳುವರಿ ಬಂದಿದೆ. ಆದರೆ, ಈ ಸಲ ಮಳೆ ಇಲ್ಲದೇ ಇಳುವರಿ ಗರಿಷ್ಠ ಎಂದರೆ ೫ ರಿಂದ ೬ ಟನ್ ಗೆ ಕುಸಿದಿದೆ. ಇದರಿಂದ ಲಾಭ ಕಡಿಮೆ ಆಗಿದೆ ಎಂದು ರೈತರು ಹೇಳುತ್ತಿದ್ದರೇ,
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ೨ ಸಾವಿರ ಎಕರೆಯಷ್ಟು ಚಂಡು ಹೂವು ಬೆಳೆಯಲಾಗಿದೆ. ಇಲ್ಲಿ ದಸರಾ, ದೀಪಾವಳಿ ಹಬ್ಬವನ್ನು ಗುರಿಯಾಗಿಟ್ಟುಕೊಂಡು ಒಳ್ಳೆಯ ಲಾಭ ಪಡೆಯುವ ಉದ್ದೇಶದಿಂದ ಕೆಲ ರೈತರು ಅರ್ಧ, ಒಂದು, ಎರಡು ಎಕರೆ ಬೆಳೆಯುತ್ತಾರೆ. ಇದರ ಜೊತೆಗೆ ಖಾಸಗಿ ಕಂಪನಿ ಜೊತೆಗೆ ಒಡಂಬಡಿಕೆ ಮಾಡಿಕೊಂಡು ನಿರಂತರ ಚಂಡು ಹೂವು ಬೆಳೆಯುವ ರೈತರು ಇದ್ದರೆ.
ಬೀಜವನ್ನು ಕಂಪನಿಗಳೇ ಕೊಡುತ್ತಿದ್ದು, ಕಟಾವು ಆರಂಭವಾದ ಬಳಿಕ ಜಮೀನಿಗೆ ಬಂದು ಹೂವು ತೆಗೆದುಕೊಂಡು ಹೋಗುತ್ತಾರೆ. ರೈತರು ಹೂವು ಬಿಡಿಸಿ ಕೊಟ್ಟರೆ ತೂಕ ಮಾಡಿಕೊಂಡು ಸಾಗಾಣಿಕೆ ಎಲ್ಲವೂ ಕಂಪನಿಗಳದ್ದರೇ ಮೊದಲೇ ಬೆಲೆ ನಿಗದಿ ಮಾಡುವುದರಿಂದ ರೈತರಿಗೆ ಲಾಭ ಖಚಿತ. ಕಳೆದ ಸಲ ಕೆಜಿಗೆ ೧೦ ಇದ್ದ ಬೆಲೆ ರೈತರ ಕೋರಿಕೆ ಮೇರಿಗೆ ಈ ಸಲ ೧೧ ರೂ.ಗೆ ಹೆಚ್ಚಿಸಿದ್ದಾರೆ. ಇದರಿಂದ ಹೆಚ್ಚಿನ ಲಾಭ ಆಗುತ್ತದೆ ಎಂದುಕೊಂಡಿದ್ದ ರೈತರಿಗೆ ಬರ ಬರೆ ಎಳೆದಿದೆ. ಕೊಳವೆಬಾವಿ ನೀರು ಹಾಯಿಸಿದರೆ ನೈಸರ್ಗಿಕವಾಗಿ ಮಳೆ ನೀರು ಬಿದ್ದರೆ ಹೆಚ್ಚಿನ ಇಳುವರಿ ಬರುತ್ತದೆ. ಈ ಸಲ ಮಳೆ ಅಭಾವದಿಂದ ಇಳುವರಿ ಕುಂಟಿತವಾಗಿದೆ. ಜೊತೆಗೆ ಕುಂಕುಮ ರೋಗವೂ ಕಾಣಿಸಿಕೊಂಡಿದ್ದರಿಂದ ಅದು ಸಹ ಇಳುವರಿ ಮೇಲೆ ಪರಿಣಾಮ ಬೀರಿದೆ ಎಂದು ಬೆಳೆಗಾರರು ನೋವು ವ್ಯಕ್ತಪಡಿಸುತ್ತಿದ್ದಾರೆ.
ಬಾದಾಮಿಯಲ್ಲಿ ಹೆಚ್ಚು : ಬಾಗಲಕೋಟೆ ಜಿಲ್ಲೆಯಲ್ಲಿ ಬಾದಾಮಿ, ಬಾಗಲಕೋಟೆ, ಮುಧೋಳ, ಜಮಖಂಡಿ ಭಾಗದಲ್ಲಿ ಹೆಚ್ಚು ಚಂಡು ಹೂವು ಬೆಳೆಯುತ್ತಾರೆ. ಬಾದಾಮಿ ತಾಲೂಕಿನಲ್ಲಿ ಈ ಸಲ ೮೦೦ ಎಕರೆ ಚಂಡು ಹೂವು ಬೆಳೆದಿದ್ದಾರೆ. ಆದರೆ, ಮಳೆ ಕೊರತೆಯಿಂದಾಗಿ ಇಳುವರಿ ಕಡಿಮೆ ಆಗಿದೆ. ಎಕರೆಗೆ ೫ ರಿಂದ ೬ ಟನ್ ಬರಬಹುದಷ್ಟೆ ಎಂದು ಹೀಗಾಗಿ ಲಾಭದ ಪ್ರಮಾಣ ಕಡಿಮೆ ಆಗುತ್ತದೆ ಎಂದು ಹೂವು ಖರೀದಿಸುವ ಖಾಸಗಿ ಕಂಪನಿಯ ಪ್ರತಿನಿಧಿ ಮಲ್ಲಪ್ಪ ನರೇಗಲ್ಲ ಹೇಳುತ್ತಾರೆ.