ಎಫ್‌ಎಚ್‌ಸಿಗಳಲ್ಲಿ ವೈದ್ಯರ ನೇಮಕಾತಿ : ಆರೋಗ್ಯ ಸಚಿವೆಗೆ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಆಗ್ರಹ

Published on

ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರ್ಲ, ವಾಣಿನಗರ ಕುಟುಂಬ ಆರೋಗ್ಯ ಕೇಂದ್ರ(ಎಫ್‌ಎಚ್‌ಸಿ)ಗಳಲ್ಲಿ ಸಮರ್ಪಕ ವೈದ್ಯರ ಸೇವೆ ಕೊರತೆಯಿದ್ದು, ಶೀಘ್ರ ನೇಮಕಾತಿ ಮಾಡಬೇಕೆಂದು ಎಣ್ಮಕಜೆ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರಿಗೆ ಪತ್ರ ಮುಖೇನ ಆಗ್ರಹಿಸಿದ್ದಾರೆ.

ಎಂಡೋಸಲ್ಫಾನ್ ಬಾಧಿತ ಪ್ರದೇಶವಾಗಿರುವ ಪಡ್ರೆ, ವಾಣಿನಗರ ಭಾಗದ ಜನಸಾಮಾನ್ಯರೇ ಹೆಚ್ಚು ಅವಲಂಬಿಸಿರುವ ಎಫ್‌ಎಚ್‌ಸಿಗಳಲ್ಲಿ ಈ ಪರಿಸ್ಥಿತಿ ಉಂಟಾಗಿದ್ದು, ಈ ಕುರಿತು ಪಂಚಾಯಿತಿಗೆ ಹಲವು ದೂರು ಬರುತ್ತಿದೆ. ಪೆರ್ಲ ಎಫ್‌ಎಚ್‌ಸಿಯಲ್ಲಿ ಒಬ್ಬ ವೈದ್ಯರ ಸೇವೆ ಮಾತ್ರ ಲಭ್ಯವಿದೆ. ವೈದ್ಯಾಧಿಕಾರಿಗಳ ಕರ್ತವ್ಯ ಮತ್ತು ಇತರ ಯೋಜನೆ ಅನುಷ್ಠಾನಗಳಿಂದಾಗಿ ವೈದ್ಯರು ರೋಗಿಗಳನ್ನು ಯಾವ ಸಮಯದಲ್ಲೂ ಪರೀಕ್ಷಿಸಲು ಸಾಧ್ಯವಾಗದಿರುವ ಪರಿಸ್ಥಿತಿ ತಲೆದೋರುತ್ತಿದೆ ಎಂದಿದ್ದಾರೆ.

ಪೆರ್ಲ ಎಫ್‌ಎಚ್‌ಸಿಗೆ ಪ್ರತಿನಿತ್ಯ 150ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ಇಲ್ಲಿ ಪ್ರಸ್ತುತ ಒಬ್ಬ ಫಾರ್ಮಾಸಿಸ್ಟ್ ಇದ್ದು, ಇಬ್ಬರು ಫಾರ್ಮಾಸಿಸ್ಟ್‌ಗಳ ಅಗತ್ಯವಿದೆ. ಎರಡು ವರ್ಷದ ಹಿಂದೆ ಪೆರ್ಲ ಎಫ್‌ಎಚ್‌ಸಿಯಲ್ಲಿ ಸಂಜೆ ಒಪಿ ಸೇವೆಯನ್ನು ಪಂಚಾಯಿತಿ ಯೋಜನೆಗೊಳಪಡಿಸಿ ಪಂಚಾಯಿತಿ ವತಿಯಿಂದ ಓರ್ವ ವೈದ್ಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಬಳಿಕ ವೈದ್ಯರ ಕೊರತೆಯಿಂದ ಸಂಜೆ ಒಪಿಗೆ ನೇಮಕಗೊಂಡ ವೈದ್ಯರು ಬೆಳಗ್ಗೆಯೇ ರೋಗಿಗಳನ್ನು ತಪಾಸಣೆ ಮಾಡಬೇಕಾದ ಸಂದಿಗ್ಧ ನಿರ್ಮಾಣವಾಗಿದೆ ಎಂದಿದ್ದಾರೆ.

ವಾಣಿನಗರ ಎಫ್‌ಎಚ್‌ಸಿಗೆ ಸರ್ಕಾರ 1 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ಸೌಲಭ್ಯ ಮತ್ತು ಇತರ ಪೂರಕ ಸೇವೆ ಒದಗಿಸಿದ್ದರೂ ಇಲ್ಲಿಯೂ ವೈದ್ಯರಿಲ್ಲ. ಇಲ್ಲಿ ಲ್ಯಾಬ್ ಆರಂಭಿಸಲು ಅಗತ್ಯವಿರುವ ಸಲಕರಣೆ ಬಂದಿವೆಯಾದರೂ ಇನ್ನೂ ಕಾರ್ಯಾಚರಣೆ ಆರಂಭಿಸಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net