ಕಡಬ: ಸರ್ಕಾರಿ ಕಚೇರಿಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲು ಭಯ ಪಡಬೇಕಿಲ್ಲ. ಸಾರ್ವಜನಿಕರು ಜಾಗೃತರಾದರೆ ಮಾತ್ರ ಭ್ರಷ್ಟಾಚಾರ ನಿಗ್ರಹ ಸಾಧ್ಯ ಎಂದು ಮಂಗಳೂರು ಲೋಕಾಯುಕ್ತ ವಿಭಾಗದ ಎಸ್‌ಪಿ ಕುಮಾರಚಂದ್ರ ಹೇಳಿದರು.
ಬುಧವಾರ ಕಡಬ ತಾಲೂಕು ಆಡಳಿತ ಸೌಧದಲ್ಲಿ ಕಡಬ ತಾಲೂಕುಮಟ್ಟದ ಲೋಕಾಯುಕ್ತ ಜನಸಂಪರ್ಕ ಸಭೆೆಯಲ್ಲಿ ಮಾತನಾಡಿದರು.
ಮುಂದೆ ತಮ್ಮ ಕೆಲಸ–ಕಾರ್ಯಗಳಿಗೆ ತೊಂದರೆ ನೀಡಬಹುದು ಎನ್ನುವ ಭಯದಿಂದ ಸಾರ್ವಜನಿಕರು ಲಂಚಕೋರ ಅಧಿಕಾರಿಗಳ ವಿರುದ್ಧ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಆ ರೀತಿ ಭಯ ಬೇಡ. ಸಾರ್ವಜನಿಕರ ಯಾವುದೇ ಕಾನೂನುಬದ್ಧ ಕೆಲಸವನ್ನು ಮಾಡಿಕೊಡುವುದು ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ. ಜನರನ್ನು ವಿನಾಕಾರಣ ಅಲೆದಾಡಿಸಿ ಹಣಕ್ಕಾಗಿ ಪೀಡಿಸಿದರೆ ಅಂತಹವರ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿ ಅಫಿದಾವಿತ್ ಮಾಡಿ ಸಲ್ಲಿಸಬೇಕು. ದೂರುದಾರರಿಗೆ ಅಧಿಕಾರಿಗಳು ಕಿರುಕುಳ ನೀಡದಂತೆ ರಕ್ಷಣೆ ನೀಡಲಾಗುವುದು ಎಂದರು.
ಸಭೆೆಯಲ್ಲಿ ಸಾರ್ವಜನಿಕರು ಭಾಗವಹಿಸಲು ನಿರಾಸಕ್ತಿ ತೋರುತ್ತಿರುವ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತ ಸಂಸ್ಥೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಗ್ರಾಮಸಭೆಗಳಲ್ಲಿ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಹಾಗೂ ಇತರ ಅಧಿಕಾರಿಗಳು ದೂರು ಅರ್ಜಿಗಳಿಗೆ ಸಂಬಂಧಿಸಿದ ಮಾಹಿತಿ ನೀಡಿದರು. ಲೋಕಾಯುಕ್ತ ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್, ಇನ್‌ಸ್ಪೆಕ್ಟರ್ ಚಂದ್ರಶೇಖರ್ ಕೆ.ಎನ್, ಸಿಬ್ಬಂದಿ ಮಹೇಶ್, ಶರತ್ ಸಿಂಗ್, ಸುರೇಂದ್ರ, ವಿನಾಯಕ್, ರುದ್ರೇಗೌಡ ಉಪಸ್ಥಿತರಿದ್ದರು.
ಅಹವಾಲು ಸಲ್ಲಿಸಲು ಜನರ ನಿರಾಸಕ್ತಿ
42 ಗ್ರಾಮಗಳ ವ್ಯಾಪ್ತಿಯ ಕಡಬ ತಾಲೂಕುಮಟ್ಟದ ಲೋಕಾಯುಕ್ತ ಜನಸಂಪರ್ಕ ಸಭೆೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ವಿವಿಧ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರೂ ಸಾರ್ವಜನಿಕರು ಭಾಗವಹಿಸಿದ್ದು ಬೆರಳೆಣಿಕೆಯಷ್ಟು. ದೂರು ಅರ್ಜಿ ಸಲ್ಲಿಕೆಯಾಗಿರುವುದು ಕೇವಲ 7 ಮಾತ್ರ. ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ಬಗ್ಗೆ ಆರೋಪಿಸುವ ಸಾರ್ವಜನಿಕರು ಲೋಕಾಯುಕ್ತ ಜನಸಂಪರ್ಕ ಸಭೆೆಯಲ್ಲಿ ಜಿಲ್ಲಾಮಟ್ಟದ ಲೋಕಾಯುಕ್ತ ಅಧಿಕಾರಿಗಳು ಸ್ವತಃ ಬಂದು ಅಹವಾಲು ಸಲ್ಲಿಸುವಂತೆ ಕೇಳಿಕೊಂಡರೂ ದೂರು ನೀಡಲು ಹಿಂದೇಟು ಹಾಕುತ್ತಿರುವುದು ಮಾತ್ರ ವಿಪರ್ಯಾಸ.
ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ವೃದ್ಧೆ..!
ಅಕ್ರಮ–ಸಕ್ರಮ ಜಮೀನಿನ ಮಂಜೂರಾತಿಗಾಗಿ 1991-92ರಲ್ಲಿ ಅರ್ಜಿ ಸಲ್ಲಿಸಿ ಅಳತೆ ಮಾಡಿ ಕಡತ ತಯಾರಾಗಿದ್ದರೂ 33 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಅಲೆದಾಡುತ್ತಿರುವ ಇಚ್ಲಂಪಾಡಿ ಗ್ರಾಮದ ವೃದ್ಧೆ ಕಮಲಾಕ್ಷಿ ನನಗೆ ಹಕ್ಕುಪತ್ರ ತೆಗೆಸಿಕೊಡಿ, ಇಲ್ಲದೇ ಹೋದರೆ ಜೀವ ಕಳೆದುಕೊಳ್ಳುವುದಷ್ಟೇ ನನ್ನ ಮುಂದಿರುವ ದಾರಿ ಎಂದು ಲೋಕಾಯುಕ್ತ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟರು. ನಾನು ವಿಧವೆ, ನನಗೆ ಮಕ್ಕಳೂ ಇಲ್ಲ. ಕಡಬ ತಾಲೂಕು ಕಚೇರಿಗೆ ಬಂದರೆ ಕಡತ ಪುತ್ತೂರಿನಲ್ಲಿದೆ ಎನ್ನುತ್ತಾರೆ. ಪುತ್ತೂರಿಗೆ ಹೋದರೆ ಅಲ್ಲಿ ಕಡತವೇ ಇಲ್ಲ ಎನ್ನುತ್ತಾರೆ. ಕಡಬ ಮತ್ತು ಪುತ್ತೂರಿಗೆ ಅಲೆದಾಡಿ ನನಗೆ ಸಾಕಾಗಿ ಹೋಗಿದೆ ಎಂದು ಗೋಳು ತೋಡಿಕೊಂಡರು. ಅವರನ್ನು ಸಮಾಧಾನಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.
ಕುಡಿಯುವ ನೀರು, ನಿವೇಶನಕ್ಕೆ ಗಡಿ ಗುರುತು
ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಲ್ಲಗಂಡಿ, ಬಾಜಿನಾಡಿ, ಕಲ್ಲಿಮಾರು, ಪನ್ಯ, ಮರೆಂಗೋಡಿ, ಬದಿಗುಡ್ಡೆ ಪ್ರದೇಶಕ್ಕೆ ಕುಡಿಯುವ ನೀರಿನ ನಲ್ಲಿ ಸಂಪರ್ಕ ಒದಗಿಸುವ ಕುರಿತು ಅಶೋಕ್‌ಕುಮಾರ್ ರೈ, ಪೆರಾಬೆ ಗ್ರಾಮದ ಗೃಹನಿವೇಶನಕ್ಕೆ ಕಾದಿರಿಸಿದ ಜಮೀನು ಗಡಿಗುರುತು ಮಾಡಿಸಿಕೊಡುವಂತೆ ಪೆರಾಬೆ ಗ್ರಾ.ಪಂ. ಸದಸ್ಯ ಫಯಾಝ್, ಕೃಷಿ ಜಮೀನಿಗೆ ತೆರಳುವ ಸರ್ಕಾರಿ ಜಾಗದಲ್ಲಿರುವ ದಾರಿಯನ್ನು ಸ್ಥಳೀಯ ವ್ಯಕ್ತಿ ಅಕ್ರಮವಾಗಿ ಮುಚ್ಚಿರುವ ಬಗ್ಗೆ ಕಡಬದ ದಾಂಬ್ರೋಡಿ ನಿವಾಸಿ ಸೀತಾರಾಮ ನಾಕ್ ಅಹವಾಲು ಸಲ್ಲಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಮನೆ ಹಸ್ತಾಂತರ : ಕೂರ್ನಡ್ಕದ ಬಡ ಮಹಿಳೆಗೆ ನಿರ್ಮಿಸಿದ ಸೂರು