ರಸ್ತೆ ಅಭಿವೃದ್ಧಿಗೆ ಅನುದಾನದ ಕೊರತೆ

road
Published on

ಮಾಗಡಿ: ಗ್ರಾಪಂಗೆ ಅನುದಾನದ ಕೊರತೆ ಇದೆ. ಈ ಬಗ್ಗೆ ಶಾಸಕರ ಗಮನಕ್ಕೆ ತಂದು ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಶ್ರೀಪತಿಹಳ್ಳಿ ಕೃಷ್ಣಪ್ಪ ತಿಳಿಸಿದರು.

ತಾಲೂಕಿನ ಕಲ್ಯ ಗ್ರಾಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿ, ನರೇಗಾ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸಿಇಒ ಹೇಳುತ್ತಾರೆ. ಆದರೆ ಇಂಜಿನಿಯರ್​ ಸಹಕಾರ ನೀಡುತ್ತಿಲ್ಲ ಎಂದರು.

ಗ್ರಾಮಗಳಲ್ಲಿನ ವಿದ್ಯುತ್​ ಲೈನ್​ಗಳಿಗೆ ಮರದ ಕೊಂಬೆ ತಗುಲಿ ಕೊಳವೆ ಬಾವಿಗಳ ಮೋಟಾರ್​ ಸುಟ್ಟು ಹೋಗುತ್ತಿದೆ. ಈ ಬಗ್ಗೆ ತಿಳಿಸಲು ಸಭೆಗೆ ಬೆಸ್ಕಾಂ ಅಧಿಕಾರಿಗಳು ಬಂದಿಲ್ಲ, ಯಾರಿಗೆ ಹೇಳುವುದು ಎಂದು ಬೇಸರ ವ್ಯಕ್ತಪಡಿಸಿದರು.

ಇದರಿಂದ ಗ್ರಾಮಸಭೆಗಳು ಉಪಯೋಗಕಾರಿ ಆಗುವುದಿಲ್ಲ. ಗ್ರಾಮಸಭೆಗಳಿಗೆ ಅಧಿಕಾರಿಗಳು ಬರುವುದರಿಂದ ನಮ್ಮ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು ಎಂದು ರೈತರು ಹಾಗೂ ನಾಗರಿಕರು ಬರುತ್ತಾರೆ. ಆದರೆ ಅಧಿಕಾರಿಗಳೇ ಇಲ್ಲದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಗ್ರಾಪಂ ನಿಯೋಜಿತ ಅಧಿಕಾರಿ, ಸಿಡಿಪಿಒ ಸುರೇಂದ್ರ ಮಾತನಾಡಿ, ಜೂನ್​, ಜುಲೈನಲ್ಲಿ ಗೃಹಲಕ್ಷಿ$್ಮ ಯೋಜನೆ ಹಣ ಬರಬೇಕಿದೆ. ತಾಂತ್ರಿಕ ಕಾರಣದಿಂದ 1,50 ಕೋಟಿ ಮಹಿಳೆಯರಲ್ಲಿ 1,50 ಲಕ್ಷ ಮಂದಿಗೆ ಗೃಹಲಕ್ಷಿ$್ಮ ಹಣ ಜಮೆಯಾಗುತ್ತಿಲ್ಲ ಎಂದರು.

ಗ್ರಾಪಂ ಸದಸ್ಯ ಕೆಎಂ.ನಾಗರಾಜು ಮಾತನಾಡಿ, ಪ್ರತಿ ಗ್ರಾಮಸಭೆಗಳಿಗೆ ತೋಟಗಾರಿಕೆ, ರೇಷ್ಮೆ ಅಧಿಕಾರಿಗಳು ಬರುತ್ತಾರೆ. ವಿಎ ಅಧಿಕಾರಿಗಳು ಪತ್ತೆ ಇಲ್ಲದಂತಾಗಿದೆ. ಇದರಿಂದ ನಾಗರೀಕರಿಗೆ, ರೈತರಿಗೆ ಸೌಲತ್ತುಗಳು ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷರ ವಿರುದ್ಧ ದಲಿತ ಮುಖಂಡರ ಆಕ್ರೋಶ

ಗ್ರಾಮ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಶ್ರೀಪತಿಹಳ್ಳಿ ಕೃಷ್ಣಪ್ಪ ಮಾತನಾಡುವಾಗ, 15ನೇ ಹಣಕಾಸು ಹಾಗೂ ವರ್ಗ 1ರಲ್ಲಿ ಅನುದಾನ ಹಾಕಿದರು ಕೆಲಸ ಪೂರ್ಣಗೊಳ್ಳದ ಸ್ಥಿತಿ ಉದ್ಭವಿಸಿದೆ. ಊರು ಎಂದ ಮೇಲೆ .... ಇದ್ದೇ ಇರುತ್ತದೆ ಎಂದರು. ಈ ವೇಳೆ ಸಭೆಯಲ್ಲಿದ್ದ ದಲಿತ ಮುಖಂಡೆ ವನಜಾ, ಅಧ್ಯಕ್ಷರ ವಿರುದ್ಧ ಕೋಪಗೊಂಡರು. ಇಂತಹ ಭಾಷೆ ಬಳಕೆ ಮಾಡಬಾರದು ಎಂದರು. ಕೂಡಲೇ ಅಧ್ಯಕ್ಷ ಕೃಷ್ಣಪ್ಪ ಮಾತನಾಡುವ ಭರದಲ್ಲಿ ಪದ ಬಳಕೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net