

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಅವಧಿಯಲ್ಲಿಯೇ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಬಿರುಸುಗೊಂಡಿದ್ದು, ಕೂಲಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ.
ಹೌದು! ಪ್ರಸ್ತುತ ಮುಂಗಾರು ಕೃಷಿ ಚಟುವಟಿಕೆಯ ಮೊದಲ ಹಂತದ ಜಮೀನುಗಳಲ್ಲಿ ಉಳುಮೆ ಬಿರುಸುಗೊಂಡಿದ್ದು, ದ್ರಾಕ್ಷಿ ಕಟಾವು, ಹೂವು ಕೀಳುವುದು ಸೇರಿ ತೋಟಗಾರಿಕೆ ಕೆಲಸಗಳು ಚುರುಕುಗೊಂಡಿವೆ. ಇದಕ್ಕಾಗಿ ರೈತರು ಕೂಲಿ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಕರೆಸಿಕೊಳ್ಳುತ್ತಿದ್ದಾರೆ. ನೆರೆ ರಾಜ್ಯಗಳ ವಲಸಿಗರು, ಕೂಲಿ ಕಾರ್ಮಿಕರು ಪ್ರತಿನಿತ್ಯ ವಿವಿಧೆಡೆ ಬೇಡಿಕೆಯ ಕೆಲಸಗಳಲ್ಲಿ ತೊಡಗಿದ್ದು, ಯಂತ್ರೋಪಕರಣಗಳ ಬಳಕೆಯ ನಡುವೆ ದುಬಾರಿ ಕೂಲಿ, ನಿರ್ವಹಣೆಗೆ ಹೆಚ್ಚಿನ ಜನರ ಅಗತ್ಯ, ಕೂಲಿಕಾರರ ಸತಾಯಿಸುವಿಕೆ ಮತ್ತು ಗೈರು ಸೇರಿ ನಾನಾ ಕಾರಣಗಳು ಮಾಲೀಕರಿಗೆ ತಲೆನೋವು ತರಿಸಿದೆ.
ಕಾರ್ಮಿಕರ ಗುತ್ತಿಗೆ ಒಪ್ಪಂದ
ಜಿಲ್ಲೆಯು ಹೂವು, ಹಣ್ಣು, ತರಕಾರಿ ಬೆಳೆಯುವುದರಲ್ಲಿ ಮೊದಲಿನಿಂದಲೂ ಮುಂಚೂಣಿಯಲ್ಲಿದೆ. ಅದರಲ್ಲೂ ದ್ರಾಕ್ಷಿಗೆ ಹೆಸರುವಾಸಿ. ಪ್ರಸ್ತುತ ಉತ್ತಮ ಫಸಲು ಬಂದರೂ ಬೆಲೆಯಲ್ಲಿನ ಏರುಪೇರು ಸಮಸ್ಯೆಗೆ ಕಾರಣವಾಗಿದೆ. ಇದರ ನಡುವೆ ಉತ್ತರ ಭಾರತದ ಕಾರ್ಮಿಕರನ್ನು ಕರೆಸಿ, ಕಟಾವು ಪ್ರಕ್ರಿಯೆ ಮಾಡಲಾಗುತ್ತಿದೆ. ಹಿಂದೆ ಕಾರ್ಮಿಕರಿಗೆ ದಿನಗೂಲಿ ಲೆಕ್ಕದಲ್ಲಿ ಹಣ ಪಾವತಿಸಲಾಗುತ್ತಿತ್ತು. ಆದರೆ, ಈಗ ಕೆಲಸವನ್ನಾಧಾರಿಸಿ ಗುತ್ತಿಗೆ ನೀಡಲಾಗುತ್ತಿದೆ. ನಿಗದಿತ ದಿನದೊಳಗೆ ಜವಾಬ್ದಾರಿ ಮುಗಿಸುವ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.
ಮುಂಬರುವ ದಿನಗಳಲ್ಲಿ ಹೆಚ್ಚಳ
ಮುಂಗಾರು ಅವಧಿ ಪ್ರಾರಂಭವಾಗುತ್ತಿದ್ದಂತೆ ಮುಂಬರುವ ದಿನಗಳಲ್ಲಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಲಿದೆ. ಬರದಿಂದ ನಷ್ಟ ಅನುಭವಿಸಿದ ರೈತರು ಪ್ರತಿ ವರ್ಷದಂತೆ ಈ ಬಾರಿಯೂ ಸಂಕಷ್ಟದ ಸಮಸ್ಯೆಗಳ ನಡುವೆ ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದು ಬಹುತೇಕ ಕಡೆ ರೈತರ ಕುಟುಂಬದಲ್ಲಿನ ಬಹುತೇಕ ಎಲ್ಲ ಸದಸ್ಯರು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪ್ರಸಕ್ತ ಮುಂಗಾರಿನಲ್ಲಿ ಉತ್ತಮ ಮಳೆ ಬೀಳುವ ಬಗ್ಗೆ ಹವಾಮಾನ ಇಲಾಖೆ ವರದಿ ನೀಡಿದೆ. ಪ್ರಸಕ್ತ ಸಾಲಿನಲ್ಲಿ 1.28 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಕೂಲಿ ಕಾರ್ಮಿಕರ ಬೇಡಿಕೆ ಹೆಚ್ಚಿಸಿದೆ.
ನಿರೀಕ್ಷೆಗೆ ತಕ್ಕಂತೆ ಸಿಗದ ಕಾರ್ಮಿಕರು
ಸೂಕ್ತ ವೇತನ ನೀಡುವ ಭರವಸೆಯ ನಡುವೆಯೂ ನಿರೀಕ್ಷೆಗೆ ಅನುಗುಣವಾಗಿ ಕಾರ್ಮಿಕರು ಸಿಗುತ್ತಿಲ್ಲ. ಇದಕ್ಕೆ ಬಹುತೇಕರು ಸುಲಭದ ಕೆಲಸಕ್ಕೆ ಒಗ್ಗಿಕೊಳ್ಳುತ್ತಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ. ಪುರುಷ ಕಾರ್ಮಿಕರಿಗೆ ಪ್ರತಿದಿನ 600 ರೂ., ಮಹಿಳಾ ಕಾರ್ಮಿಕರಿಗೆ 500 ರೂ. ನೀಡಲಾಗುತ್ತದೆ. ಮತ್ತೊಂದೆಡೆ ದ್ರಾಕ್ಷಿ ಕಟಾವು, ಕ್ಯಾರೆಟ್ ಮತ್ತು ಹೂಕೋಸು, ತರಕಾರಿ, ಹೂವುಗಳನ್ನು ಕಿತ್ತು ಮೂಟೆಗೆ ತುಂಬಿಸುವುದು, ಬೆಳೆಗಳಿಗೆ ಔಷಧ ಸಿಂಪಡಿಸುವ ಕೆಲಸಕ್ಕೆ ಪುರುಷರಿಗೆ 750 ರೂ. ಮತ್ತು ಹೆಂಗಸರಿಗೆ 650 ರೂ. ನೀಡಲಾಗುತ್ತದೆ. ಆದರೂ ನಿರೀಕ್ಷೆಗೆ ತಕ್ಕಂತೆ ಕಾರ್ಮಿಕರು ಸಿಗುತ್ತಿಲ್ಲ.
ಯಂತ್ರೋಪಕರಣ ಬಳಕೆ
ನರೇಗಾ ಯೋಜನೆಯಲ್ಲಿ ಕಾರ್ಮಿಕರು ಹೆಸರಿಗಷ್ಟೇ. ಇಲ್ಲಿ ಬಹುತೇಕ ಶೇ.80 ಕೆಲಸಗಳು ಯಂತ್ರೋಪಕರಣಗಳಲ್ಲಿ ನೆರವಿನಿಂದಲೇ ನಡೆಯುತ್ತಿವೆ. ಜಾಬ್‌ಕಾರ್ಡ್ ಮತ್ತು ಕೂಲಿ ಹಂಚಿಕೆಯಲ್ಲಿ ಅಧಿಕಾರಿಗಳು ಸಾಧನೆಯನ್ನು ಹೇಳಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರು ಲಾಭದ ಲೆಕ್ಕಾಚಾರಕ್ಕೆ ಸೀಮಿತವಾಗಿದ್ದು, ಮತ್ತೊಂದೆಡೆ ಕಡಿಮೆ ವೇತನ, ಕೂಲಿ ವಿಳಂಬ ಮತ್ತು ಸತಾಯಿಸುವಿಕೆಗೆ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ.
ದ್ರಾಕ್ಷಿ ಕಟಾವು, ತೋಟದಲ್ಲಿನ ಹೂವು ಕೀಳುವುದು ಸೇರಿ ನಾನಾ ಪ್ರಕ್ರಿಯೆಗಳ ನಿರ್ವಹಣೆಯಲ್ಲಿ ಸಹಜವಾಗಿ ಕೃಷಿ ಕೂಲಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ಕೌಶಲಾಧಾರಿತ ಕೆಲಸಗಾರರು ದಿನಗೂಲಿಗಿಂತಲೂ ಒಪ್ಪಂದದ ಗುತ್ತಿಗೆ ಕೆಲಸವನ್ನು ಬಯಸುತ್ತಿದ್ದಾರೆ.
- ಮೋಹನ್, ದ್ರಾಕ್ಷಿ ಬೆಳೆಗಾರ, ಚಿಕ್ಕಬಳ್ಳಾಪುರ
ಜಮೀನಿನಲ್ಲಿ ಟೊಮ್ಯಾಟೊ ಬೆಳೆಯಲು ಮುಂದಾಗಿದ್ದು, ಈಗಾಗಲೇ ಉತ್ಪನ್ನ, ಅಗತ್ಯ ನಾರು ತರಿಸಲಾಗಿದೆ. ಆದರೆ, ಇದನ್ನು ನಾಟಿ ಮಾಡಲು ಕಾರ್ಮಿಕರಿಗಾಗಿ ದಿನಗಟ್ಟಲೇ ಕಾದು ಕೊನೆಗೆ ಕುಟುಂಬದ ಸದಸ್ಯರೊಂದಿಗೆ ಪ್ರಕ್ರಿಯೆ ಮುಗಿಸಲಾಯಿತು. ಸೂಕ್ತ ಸಮಯದಲ್ಲಿ ಕಾರ್ಮಿಕರು ಸಿಗುತ್ತಿಲ್ಲ.
- ಮುನಿರಾಮು, ಟೊಮ್ಯಾಟೋ ಬೆಳೆಗಾರ, ಚಿಕ್ಕಬಳ್ಳಾಪುರ