ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರ ಆಯ್ಕೆ ಇಂದು : ಸೋಮಶೇಖರ ಗೋನಾಯಕ ಹೊಸ ಸಾರಥಿ ?

IMG-20230817-WA0018
Published on

ನಿರ್ದೇಶಕರಾಗಿ ಸಿರವಾಳ ನಾಮನಿರ್ದೇಶನ | ರಿಂಗ್ ಮಾಸ್ಟರ್ ಮಿನಿಸ್ಟರ್ ದರ್ಶನಾಪುರ ಪ್ಲಾನ್

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಯಾದಗಿರಿ-ಕಲಬುರಗಿ ಜಿಲ್ಲಾ  ಕೇಂದ್ರ ಸಹಕಾರ ಬ್ಯಾಂಕ್ ನೂತನ ಅಧ್ಯಕ್ಷರ ಆಯ್ಕೆಗಾಗಿ ಚುನಾವಣಾ ಪ್ರಕ್ರಿಯೆ ಇಂದು ಶುಕ್ರವಾರ ನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ಜರುಗಲಿದೆ. ಆಡಳಿತಾರೂಢ  ಕಾಂಗ್ರೆಸ್ ಪಕ್ಷವು  ಈ ಸಲ ಡಿಸಿಸಿ ಬ್ಯಾಂಕ್‌ನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಲಕ್ಷ್ಮಣ ಗಳು ಸ್ಪಷ್ಟವಾಗಿವೆ.
ಈ ಹಿಂದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ರಾಜಕುಮಾರ ಪಾಟೀಲ್ ತೇಲ್ಕೂರ ಅವರು ರಾಜೀನಾಮೆಯಿಂದ ಅಧ್ಯಕ್ಷ  ಹಾಗೂ ನಿರ್ದೇಶಕ ಸ್ಥಾನ  ತೆರವಾಗಿತ್ತು. ಬಳಿಕ ಆಡಳಿತ ಮಂಡಳಿಯವರು ಸೇರಿಕೊಂಡು ನಿಯಮದಂತೆ ಉಪಾಧ್ಯಕ್ಷ ಸುರೇಶ ಸಜ್ಜನ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ  ಆಯ್ಕೆ ಮಾಡಿದ್ದರು.
ಕಾಯಂ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ದಿನಾಂಕ ನಿಗದಿಪಡಿಸಿ ಸಹಕಾರ ಅಧಿಕಾರಿಗಳು ಆದೇಶ ಹೊರಡಿಸಿದ ಬೆನ್ನಲ್ಲಿಯೇ ಡಿಸಿಸಿ ಬ್ಯಾಂಕಿನ ರಿಂಗ್ ಮಾಸ್ಟರ್ ಎಂದು ಕರೆಸಿಕೊಳ್ಳುವ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಅವರು  ಪ್ಲಾನ್ ರೂಪಿಸಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಅಧ್ಯಕ್ಷರನ್ನಾಗಿಸಲು  ಕಾರ್ಯತಂತ್ರ ರೂಪಿಸಿದ್ದಾರೆ. ಅಲ್ಲದೆ ಶಹಾಪುರದ ಮೆಹಮೂದ್ ಇಬ್ರಾಹಿಂ ಸಿರವಾಳ ಅವರನ್ನು ಡಿಸಿಸಿ ಬ್ಯಾಂಕಿನ ನಾಮನಿರ್ದೇಶಿತ ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಿ ಸಹಕಾರ ಇಲಾಖೆ ಆದೇಶ ಹೊರಡಿಸಿದೆ.
ಈ ನೇಮಕದೊಂದಿಗೆ ಕಾಂಗ್ರೆಸ್ ಬಹುಮತ ಆಗಲಿದೆ. ಶುಕ್ರವಾರ ಬೆಳಗ್ಗೆ ೧೧ ಗಂಟೆಗೆ ಜರುಗಲಿರುವ ಚುನಾವಣೆಯ ಪ್ರಕ್ರಿಯೆಯಲ್ಲಿ  ಮಾಜಿ ಅಧ್ಯಕ್ಷರಾಗಿರುವ ಸೋಮಶೇಖರ ಗೋನಾಯಕ ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಅವರ ಪರವಾಗಿ ಬಹುಮತವಿದ್ದು, ಪಕ್ಷದ ಮುಖಂಡರ ಜತೆಗೆ ಚರ್ಚೆ ನಡೆಸಿ ಹೆಸರು ಅಂತಿಮಗೊಳಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net