

ಬೆಂಗಳೂರು: ಬಸವಣ್ಣ, ಕುವೆಂಪು ಅವರ ವಿಚಾರಧಾರೆಗಳನ್ನು ಭಾಷಣದ ಸರಕನ್ನಾಗಿ ಬಳಸಲಾಗುತ್ತಿದೆಯೇ ಹೊರತು ಯಾರೂ ಪಾಲಿಸುತ್ತಿಲ್ಲ ಎಂದು ಕಾನೂನು ಮತ್ತು ಸಂದೀಯ ಸಚಿವ ಎಚ್.ಕೆ.ಪಾಟೀಲ ಬೇಸರಿಸಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಹಾಗೂ ಎಂ.ಚಂದ್ರಶೇಖರ್ ಪ್ರತಿಷ್ಠಾನದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗುಜರಾತಿ ಲೇಖಕಿ ಹಿಮಾಂಶಿ ಇಂದೂಲಾಲ್ ಶೆಲತ್ ಅವರಿಗೆ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಮಾಡಿ ಮಾತನಾಡಿದರು.
ಕುವೆಂಪು ಅವರು ಮನುಜಮತ ವಿಶ್ವಪಥ ಸಂದೇಶ ನೀಡಿದರು. ಆದರೆ ಇಂದು ವಿಶ್ವಮಾನವ ಆಗುತ್ತೇನೆ ಎಂದು ಹೇಳುವವರು ಯಾರಿದ್ದಾರೆ? ಭಾಷೆಯ ಮೇಲಿನ ಪ್ರಭಾವ ಅಥವಾ ಶ್ರೇಷ್ಠತೆಯ ಕಾರಣದಿಂದ ಅವರು ಸಾಹಿತ್ಯ ರಚಿಸಲಿಲ್ಲ. ಬದಲಿಗೆ ಅವರದ್ದು ದಾರ್ಶನಿಕ ಸಾಹಿತ್ಯ. ಅವರ ಸಂದೇಶಗಳು ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯಗಳಾಗಿವೆ ಎಂದರು.
ಮಾದರಿ ಪ್ರತಿಷ್ಠಾನ: ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, 25 ಸಾಂಸ್ಕೃತಿಕ ಟ್ರಸ್ಟ್‌ಗಳಿಗೆ ವಾರ್ಷಿಕ 2.5 ಕೋಟಿ ಅನುದಾನ ನೀಡಲಾಗುತ್ತಿದೆ. ಹೆಚ್ಚಿನ ಅನುದಾನ ನೀಡಬೇಕೆಂಬ ಬೇಡಿಕೆದ್ದು, ಈ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ ಎಂದರು.
ಪ್ರಭುತ್ವದ ಜೊತೆ ರಾಜಿಯಾಗಲಿಲ್ಲ: ಪ್ರಭುತ್ವವನ್ನು ಪ್ರಶ್ನೆ ಮಾಡುವುದು ಹೇಗೆ ಎನ್ನುವುದನ್ನು ತೋರಿಸಿಕೊಟ್ಟ ಕುವೆಂಪು ಅವರು, ಎಂದೂ ಪ್ರಭುತ್ವದ ಜತೆಗೆ ರಾಜಿಯಾಗಲಿಲ್ಲ. ಅವರು ಯಾವುದೇ ಜಾತಿಯ ದ್ವೇಷಿಯಾಗಿರಲಿಲ್ಲ. ವಿವಿಧ ಧರ್ಮಗಳ ಪುರೋಹಿತಶಾಹಿಯನ್ನು ವಿರೋಧಿಸಿದ್ದರೇ ಹೊರತು, ಬ್ರಾಹ್ಮಣರನ್ನಲ್ಲ. ಆದರೆ ಅವರನ್ನು ಕೆಲವರು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಬೇಸರಿಸಿದರು.
ಪ್ರಶಸ್ತಿ ಸ್ವೀಕರಿಸಿದ ಹಿಮಾಂಶಿ ಇಂದೂಲಾಲ್ ಶೆಲತ್ ಅವರು ಕನ್ನಡ ಸಾಹಿತ್ಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ಶಂಕರ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಇತರರು ಇದ್ದರು.
ಕೋಟ್
ಸಾಹಿತಿಗಳು ಸರ್ಕಾರದ ವಕ್ತಾರರಾಗಬಾರದು. ಸಹಾನುಭೂತಿ ಇರುವ ಸರ್ಕಾರ ಇದ್ದಾಗಲೂ ಅದರಿಂದ ಅಂತರ ಕಾಪಾಡಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿದಿರಬೇಕು. ಇಲ್ಲವಾದರೆ ಸರ್ಕಾರದ ವಕ್ತಾರರಾಗುತ್ತೇವೆ.
ಬರಗೂರು ರಾಮಚಂದ್ರಪ್ಪ, ಸಾಹಿತಿ
ಕೋಟ್
ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಪ್ರತಿಷ್ಠಾನಕ್ಕೆ ಬಿಡಿಎ ಮುಕ್ಕಾಲು ಎಕರೆ ಭೂಮಿ ನೀಡಿದೆ. ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಕಲಾಭವನ ನಿರ್ಮಿಸಿ, ಅಲ್ಲಿ ಮಂತ್ರ ಮಾಂಗಲ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು.
ಬಿ.ಎಲ್. ಶಂಕರ್, ಅಧ್ಯಕ್ಷ, ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ