

ಸಕಲೇಶಪುರ: ಬೆಳಗೋಡು ಹೋಬಳಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಬೆಳಗೋಡು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಳಗೋಡು ಹೋಬಳಿ ಕೇಂದ್ರದಲ್ಲಿ ಸಾರ್ವಜನಿಕರಿಗಾಗಿ ಬಸ್ ನಿಲ್ದಾಣ ಇಲ್ಲದ ಹಿನ್ನೆಲೆಯಲ್ಲಿ ಸುಮಾರು 4.5 ಲಕ್ಷ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಿ ಉದ್ಘಾಟಿಸಲಾಗಿದೆ. ಇದೇ ರೀತಿ ಕೂಲಿ ಕಾರ್ಮಿಕ ಮಹಿಳೆಯರು ಹೆಚ್ಚಿರುವ ಬೆಳಗೋಡು ಗ್ರಾಮದ ಮಹಿಳೆಯರ ಅನುಕೂಲಕ್ಕಾಗಿ ಕೂಸಿನ ಮನೆಯನ್ನು ತೆರೆಯಲಾಗಿದೆ. ಇದು ಶಿಶುಪಾಲನ ಕೇಂದ್ರವಾಗಿದ್ದು 3 ವರ್ಷದೊಳಗಿನ ಮಕ್ಕಳನ್ನು ಬಿಡಬಹುದಾಗಿದೆ. ಇದರಿಂದ ಕೂಲಿ ಕಾರ್ಮಿಕ ಮಹಿಳೆಯರು ಕೆಲಸಕ್ಕೆ ನೆಮ್ಮದಿಯಾಗಿ ಹೋಗಿ ಬರಬಹುದಾಗಿದೆ. ಇದನ್ನು ಕೂಲಿ ಕಾರ್ಮಿಕ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು. ಬೆಳಗೋಡು ಹೋಬಳಿ ಕೇಂದ್ರದಲ್ಲಿ ಹಲವು ಸಮಸ್ಯೆಗಳಿದ್ದು, ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಪಿಡಿಒ ಸುಮ್ಮನೇ ಕೂರಬಾರದು. ಸಮಸ್ಯೆಗಳನ್ನು ಶಾಸಕರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಪಿಡಿಒಗೆ ತರಾಟೆ: ಬೆಳಗೋಡು ಗ್ರಾಪಂ ವ್ಯಾಪ್ತಿಯ ದಿನಸಿ ಅಂಗಡಿಗಳಲ್ಲಿ ಮದ್ಯ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಗ್ರಾಮದ ಬಡವರು, ಕೂಲಿಕಾರ್ಮಿಕರು ದುಡಿದ ಸಂಪೂರ್ಣ ಹಣವನ್ನು ಮದ್ಯಪಾನಕ್ಕೆ ಸುರಿಯುತ್ತಿದ್ದಾರೆ. ಕೂಡಲೇ ಮದ್ಯ ಅಕ್ರಮ ಮಾರಾಟ ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಕೆಲ ಸದಸ್ಯರು ಶಾಸಕರ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಶಾಸಕರು ಪಿಡಿಒ ಲಕ್ಷ್ಮೀನರಸಯ್ಯ ಅವರನ್ನು ಕೇಳಿದಾಗ ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ ಎಂದರು. ಇದಕ್ಕೆ ಗರಂ ಆದ ಶಾಸಕರು ಅಲ್ಲರೀ ಮದ್ಯ ಅಕ್ರಮ ಮಾರಾಟ ನಿಲ್ಲಿಸಲು ಜಿಲ್ಲಾಧಿಕಾರಿ ಬರಬೇಕಾ? ಅಬಕಾರಿ ಇಲಾಖೆ ಗಮನಕ್ಕೆ ತನ್ನಿ, ಇಲ್ಲ ನೇರವಾಗಿ ನೀವೇ ಕ್ರಮ ತೆಗೆದುಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು.