

ಕುಷ್ಟಗಿ: ಮೇಘಾಲಯ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಾಲ್ವರು ಸದಸ್ಯರ ತಂಡ ತಾಲೂಕಿನ ವಿವಿಧ ಮಾದರಿ ಅಂಗನವಾಡಿ ಕೇಂದ್ರಗಳಿಗೆ ಶನಿವಾರ ಭೇಟಿ ನೀಡಿ ಶಾಲಾ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿ ಮಾಹಿತಿ ಸಂಗ್ರಹಿಸಿತು.
ತಾಲೂಕಿನ ಹಿರೇಮನ್ನಾಪುರದ ಅಂಗನವಾಡಿ 3ನೇ ಕೇಂದ್ರಕ್ಕೆ ಭೇಟಿ ನೀಡಿದ ಸದಸ್ಯರು, ಮಕ್ಕಳ ಚಟುವಟಿಕೆ ಆಧರಿತ ಕಲಿಕೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಇಕ್ಕಟ್ಟಾದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕೇಂದ್ರಕ್ಕೆ ಮೂಲ ಸೌಕರ್ಯ ಇಲ್ಲವಾದರೂ ಮಕ್ಕಳು ಕಲಿಕೆಯಲ್ಲಿ ಕ್ರಿಯಾಶೀಲರಿರುವುದನ್ನು ಕಂಡ ತಂಡ ಇಚ್ಛಾಶಕ್ತಿ ಇದ್ದರೆ ಬೋಧನೆ ಹಾಗೂ ಕಲಿಕೆಗೆ ಕೊರತೆಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈ ಕೇಂದ್ರ ಸಾಕ್ಷಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲಾಪೂರ್ವ ಶಿಕ್ಷಣದ ವೇಳಾಪಟ್ಟಿಯಂತೆ ಮಕ್ಕಳ ಮುಕ್ತ ಆಟ, ಕ್ಯಾಲೆಂಡರ್ ಹಾಗೂ ಹವಾಮಾನ ಕುರಿತ ಮಾಹಿತಿ, ಅಭಿನಯ ಗೀತೆ, ಹೊರಾಂಗಣ ಕ್ರೀಡೆ ಹೀಗೆ ಮಕ್ಕಳ ವಿವಿಧ ಚಟುವಟಿಕೆ ವೀಕ್ಷಿಸಿದ ತಂಡದ ಸದಸ್ಯರು, ಇಲ್ಲಿನ ಕಲಿಕಾ ಪದ್ಧತಿಯನ್ನು ತಮ್ಮ ರಾಜ್ಯದ ಕೇಂದ್ರಗಳಲ್ಲಿಯೂ ಅಳವಡಿಸಿಕೊಳ್ಳುವುದಾಗಿ ತಿಳಿಸಿದರು.
ತಂಡದಲ್ಲಿದ್ದ ಮೇಘಾಲಯ ರಾಜ್ಯದ ಸ್ಟೇಟ್ ಪ್ರೋಗ್ರಾಮ್ ಆಫೀಸರ್ ದಾವನ್, ಪ್ರೋಗ್ರಾಮ್ ಮ್ಯಾನೇಜರ್ ಮೇರಿ ರಿಂಜಾ, ಸಿಡಿಪಿಒ ವಿಕ್ಟೋರಿಯಾ ಸಾಂಗ್ಮಾ, ಟಾಟಾ ಕಲಿಕಾ ಟ್ರಸ್ಟ್‌ನ ಪ್ರೋಗ್ರಾಮ್ ಆಫೀಸರ್ ವೀಣಾ, ಶಾಲಾ ಪೂರ್ವ ಶಿಕ್ಷಣದ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಕುರಿ, ಇಲ್ಲಿನ ಸಿಡಿಪಿಒ ಯಲ್ಲಮ್ಮ ಹಂಡಿ, ಕೇಂದ್ರದ ಕಾರ್ಯಕರ್ತೆ ಗೀತಾ ಕುಷ್ಟಗಿ ಇದ್ದರು.