ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ಶಿಡ್ಲಟ್ಟ, ಚೇಳೂರು ತಾಲೂಕಿನಲ್ಲಿ ಇತ್ತೀಚೆಗೆ ಬಿದ್ದ ಜೋರು ಮಳೆಯಿಂದ ಚಿಂತಾಮಣಿ&ಚೇಳೂರು ಮುಖ್ಯರಸ್ತೆಯ ಹೊಸಹಡ್ಯ ಸಮೀಪದ ಕುಶಾವತಿ ನದಿ ತುಂಬಿ ಹರಿಯುತ್ತಿದೆ. ಆದರೆ, ಚೆಕ್ ಡ್ಯಾಂ ನಿರ್ಮಾಣವಾಗದ ಕಾರಣ ಈ ಭಾಗದ ಜನರಿಗೆ ಲಾಭವಿಲ್ಲದಂತಾಗಿದೆ.
ಶಿಡ್ಲಟ್ಟ ತಾಲೂಕಿನ ತಿಮ್ಮಸಂದ್ರ ವ್ಯಾಪ್ತಿಯಲ್ಲಿ ಬಿದ್ದ ಮಳೆ, ಚಿಂತಾಮಣಿ, ಚೇಳೂರು ತಾಲೂಕಿಗೆ ಸೇರಿಕೊಂಡಿರುವ ಚಿಲಕಲನೇರ್ಪು ಹೋಬಳಿ, ಗಡಿಗವಾರಹಳ್ಳಿ, ತುಳುವನೂರು ಮತ್ತಿತರ ಕಡೆ ಬಿದ್ದ ಮಳೆ ಕುಶಾವತಿ ನದಿಗೆ ಸೇರಿಕೊಳ್ಳುತ್ತಿದ್ದ ನೀರು ಚಿಂತಾಮಣಿ&ಚೇಳೂರು ರಸ್ತೆಯ ಹೊಸಹುಡ್ಯ ಗ್ರಾಮದ ಪಕ್ಕದಲ್ಲಿ ಹರಿದು ಹೋಗುತ್ತದೆ.
ವಾರದಿಂದ ಬೀಳುತ್ತಿರುವ ಮಳೆಯಿಂದ 3 ದಿನಗಳಿಂದ ಕುಶಾವತಿ ನದಿ ತುಂಬಿ ಹರಿಯುತ್ತಿದೆ.
ನದಿಯ ನೀರು ಹರಿಯುವ ಪ್ರದೇಶದಲ್ಲಿ ಚೆಕ್ಡ್ಯಾಂ ಇಲ್ಲದಿರುವುದರಿಂದ ಪ್ರತಿವರ್ಷ ಮಳೆಗಾಲದಲ್ಲಿ ನೀರು ನೆರೆಯ ಆಂಧ್ರದ ಕೆರೆಗಳು ತುಂಬಿ ಕೋಡಿ ಹರಿಯುತ್ತಿದೆಯೇ ಹೊರತು ನಮ್ಮ ಭಾಗದ ರೈತರಿಗೆ ಅನುಕೂಲವಾಗಿಲ್ಲ ಎಂಬದು ಬಹುತೇಕ ರೈತರ ಆರೋಪ. ಇನ್ನು ನದಿ ಹರಿಯುವ ರಸ್ತೆಯಲ್ಲಿ ವಾಹನ ತೊಳೆದುಕೊಳ್ಳುವುದಕ್ಕೆ ಮಾತ್ರ ನೀರು ಪ್ರಯೋಜನವಾಗಿದೆ.
ದೊಡ್ಡ ಪ್ರಮಾಣದಲ್ಲಿ ಮಳೆಯಾದರೂ ಬಹುತೇಕ ಕೆರೆಗಳಿಗೆ ನೀರು ಹರಿದು ಬಂದಿಲ್ಲ, ಕುಶಾವತಿ ನದಿ ಹರಿಯವ ಜಾಗದಲ್ಲಿ ಕನಿಷ್ಠ ಕೆಲ ಕಡೆ ಚೆಕ್ ಡ್ಯಾಂ ನಿರ್ಮಾಣ ಮಾಡಿ ಅಲ್ಲಿಂದ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗಿದ್ದರೂ ರೈತರಿಗೆ ಪ್ರಯೋಜನವಾಗುತ್ತಿತ್ತು. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮಹರಿಸುವಂತೆ ಗ್ರಾಮಸ್ಥರ ಒತ್ತಾಯ.
ಚಿಂತಾಮಣಿ ತಾಲೂಕು ವ್ಯಾಪ್ತಿಯಲ್ಲಿ ಹರಿಯುವ ಪಾಪಾಗ್ನಿ ನದಿಯ ನೀರು ಸಹ ಆಂಧ್ರಪ್ರದೇಶಕ್ಕೆ ಹರಿಯುತ್ತದೆ. ಆದರೆ, ಪಾಪಾಗ್ನಿ ನದಿಗೆ ಹಲವಾರು ಕಡೆ ಚೆಕ್ ಡ್ಯಾಂ ನಿರ್ಮಾಣ ಮಾಡಿದ ಪರಿಣಾಮ ಅಂರ್ತಜಲ ವೃದ್ಧಿಯ ಜತೆಗೆ ಕೆಲವು ಕಡೆ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಅದೇ ರೀತಿ ಕುಶಾವತಿ ನದಿಗೆ ಚೆಕ್ ಡ್ಯಾಂ ನಿರ್ಮಾಣ ಮಾಡಿದರೆ ಅಂರ್ತಜಲ ವೃದ್ಧಿಗೆ ಆದ್ಯತೆ ನೀಡದಂತಾಗುತ್ತದೆ.
| ಆಂಜನೇಯರೆಡ್ಡಿ ಏನಿಗದೆಲೆ ಗ್ರಾಮದ ನಿವಾಸಿ
ಶಿಡ್ಲಟ್ಟ, ಚೇಳೂರು ಮತ್ತು ಚಿಂತಾಮಣಿ ಭಾಗದಲ್ಲಿ ಜೋರು ಮಳೆ ಬಿದ್ದಾಗ ನೀರು ಕುಶಾವತಿ ನದಿಗೆ ಹರಿಯುತ್ತದೆ. ಕುಶಾವತಿ ನೀರು ಹೊಸಹುಡ್ಯ ಗ್ರಾಮ ಬಿಟ್ಟ ನಂತರ 5&6 ಕಿಮೀ ದೂರದ ಆಂಧ್ರಪ್ರದೇಶದ ಗಡಿ ಪ್ರದೇಶಕ್ಕೆ ಸೇರುತ್ತದೆ. ಗಡಿಗವಾರಹಳ್ಳಿ, ತುಳವನೂರು, ಹೊಸಹುಡ್ಯ ಬಳಿ ಚೆಕ್ ಡ್ಯಾಂ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಬೇಡಿಕೆ ಇದ್ದರೂ ಇದುವರೆವಿಗೂ ಯಾರೂ ಗಮನಹರಿಸದ ಪರಿಣಾಮ ನೀರು ಆಂಧ್ರದ ಪಾಲಾಗುತ್ತಿದೆ.